ನೇಕಾರ ಸಮುದಾಯದ ಪ್ರತ್ಯೇಕ ಜಾತಿ ಗಣತಿಗೆ ನಿರ್ಧಾರ

10BGV1-NEKAR MEETING
Published on

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಸರ್ಕಾರದ 2015ರ ಜಾತಿ ಗಣತಿಯಲ್ಲಿ ನೇಕಾರ ಸಮುದಾಯವನ್ನು ಕಡಿಮೆ ಸಂಖ್ಯೆಯಲ್ಲಿ ತೋರಿಸಲಾಗಿದೆ. ಸರ್ಕಾರದ ಈ ಜಾತಿ ಗಣತಿಗೆ ನಮ್ಮ ವಿರೋಧವಿದ್ದು, ಈ ಅನ್ಯಾಯ ಸರಿಪಡಿಸಲು ನೇಕಾರ ಸಮುದಾಯಗಳ ಒಕ್ಕೂಟದಿಂದ ಪ್ರತ್ಯೇಕ ಜಾತಿ ಗಣತಿ ಮಾಡಿ ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದು ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಸೋಮಶೇಖರ ಹೇಳಿದರು.

ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಬೆಳಗಾವಿ ಘಟಕದಿಂದ ನಗರದ ಶಹಾಪುರದ ಹಟ್ಟಿಹೊಳಿ ಗಲ್ಲಿಯ ಬನಶಂಕರಿ ದೇವಸ್ಥಾನ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಕೈಮಗ್ಗ ದಿನ ಹಾಗೂ ಜಾತಿ ಜನಗಣತಿ ಜಾಗೃತಿ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶಕ್ಕೆ ರೈತರಷ್ಟೇ ನೇಕಾರರು ಮುಖ್ಯ. ಪ್ರತ್ಯೇಕ ಜಾತಿ ಗಣತಿಗೆ ನಿರ್ಧಾರ ಮಾಡಲಾಗಿದೆ. ಈ ಸಮೀಕ್ಷೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಜಾತಿಗಣತಿ ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಸೌಲಭ್ಯ ಕಲ್ಪಿಸಲು ಪ್ರಯತ್ನ: ಶಾಸಕ ಅಭಯ ಪಾಟೀಲ ಮಾತನಾಡಿ, ಜಾತಿ ಮೂಲಕವೇ ಸರ್ಕಾರ ಸಮುದಾಯಗಳಿಗೆ ಅನುದಾನ ಮೀಸಲಿಡುತ್ತಿದೆ. ಹೀಗಾಗಿ ಜಾತಿ ಗಣತಿಗೆ ಪ್ರಾಮುಖ್ಯತೆ ನೀಡಬೇಕು. ನಾವೇ ಗಣತಿ ಮಾಡಿ ಸರ್ಕಾರಕ್ಕೆ ಒಪ್ಪಿಸುತ್ತೇವೆ ಎಂಬ ನೇಕಾರರ ನಿರ್ಧಾರ ಸ್ವಾಗತಾರ್ಹ. ನೇಕಾರರಿಗೆ ಎಲ್ಲ ಸರ್ಕಾರಗಳು ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದರು. ಒಕ್ಕೂಟದ ಬೆಳಗಾವಿ ಘಟಕದ ಅಧ್ಯಕ್ಷ ಗಜಾನನ ಗುಂಜೇರಿ ಮಾತನಾಡಿ, ಜಗದ ಮಾನ ಮುಚ್ಚುವ ಕಾಯಕ ನಮ್ಮದು. ಅದಕ್ಕೆ ನೇಕಾರರು ಹೆಮ್ಮೆ ಪಡಬೇಕು. ಉಳಿದ ಸಮುದಾಯಗಳ ಜಾತಿಗಣತಿಗಳಂತೆ ನೇಕಾರ ಸಮುದಾಯವೂ ಜಾತಿ ಗಣತಿಗೆ ಒತ್ತು ನೀಡಬೇಕು ಎಂದರು. ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಗೋ. ತಿಪ್ಪೇಶ, ಪ್ರಸನ್ನಕುಮಾರ ಕುಲಗೋಡ, ಶಂಕ್ರಣ್ಣ ಮುರುಡಿ, ಸುರೇಶ ಧೋತ್ರೆ, ರವೀಂದ್ರ ಪಾಟೀಲ, ರವಿ ಲೋಲಿ, ಡಾ. ಗುರುರಾಜ ಗಾಡದ, ಮಾರುತಿ ಗರಡಿಮನಿ, ಗೋಪಾಲ ಗದಗಿನ, ಈರಣ್ಣ ಮಾಸ್ತಮರಡಿ, ಗೋಪಾಲ ಕರದಿನ, ಇತರರಿದ್ದರು.

ನೇಕಾರ ಪ್ರಶಸ್ತಿ ನೀಡಿ ಸನ್ಮಾನ

ಪುಂಡಲೀಕಪ್ಪ ಕರದಿನ, ವಿಷ್ಣು ಗದಗಿನ, ಭೋಜಪ್ಪ ಸಂಕಪ್ಪ ಮುಗಳಿ, ರಾಚಪ್ಪ ಗಂಜಿ, ಸೇರಿದಂತೆ ಐವರಿಗೆ ನೇಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net