

ಮದ್ದೂರು: ಕಾವೇರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬೊಮ್ಮನದೊಡ್ಡಿ ಗ್ರಾಮದ ಬಿ.ಎಸ್.ರವೀಂದ್ರ ಅವಿರೋಧವಾಗಿ ಆಯ್ಕೆಯಾದರು.
ಎಂ.ಸಿ.ರೇಣುಕುಮಾರ್ ಅವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಬಿ.ಎಸ್.ರವೀಂದ್ರ ಅವರನ್ನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಸಂತೋಷ್ ಅವಿರೋಧ ಆಯ್ಕೆ ಪ್ರಕಟಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಎಸ್.ರವೀಂದ್ರ ಅವರನ್ನು ಸಂಘದ ನಿರ್ದೇಶಕರು ಹಾಗೂ ಸ್ಥಳೀಯ ಮುಖಂಡರು ಅಭಿನಂದಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಬಿ.ಎಸ್.ರವೀಂದ್ರ, ಯಾವುದೇ ಚ್ಯುತಿ ಬಾರದಂತೆ ಶ್ರದ್ಧೆ ಹಾಗೂ ಪ್ರಾಮಣಿಕತೆಯಿಂದ ಕರ್ತವ್ಯ ನಿರ್ವಹಿಸಲಾಗುವುದು. ಆ ಮೂಲಕ ಸಹಕಾರ ಸಂಘದ ಶ್ರೇಯೋಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಲಾಗುವುದು ಎಂದರು.
ಈಗಾಗಲೇ ಸಹಕಾರ ಸಂಘದಲ್ಲಿ 1300 ಸದಸ್ಯರಿದ್ದು ಮೂರು ಕೋಟಿ ರೂ.ಗೂ ಹೆಚ್ಚು ವಾರ್ಷಿಕ ವಹಿವಾಟು ಇದೆ. ಸುಮಾರು 70 ಲಕ್ಷ ರೂ. ವ್ಯಾಪಾರ ಅಭಿವೃದ್ಧಿ ಸಾಲ, ಪಿಗ್ಮಿ ಆಭರಣ ಹಾಗೂ ಸ್ವಸಹಾಯ ಸಂಘಗಳಿಗೆ ಸಾಲ ವಿತರಿಸಲಾಗಿದೆ ಎಂದು ವಿವರಿಸಿದರು.
ಸಾಲ ಪಡೆದ ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿಸುವ ಮೂಲಕ ಸಂಘದ ಶ್ರೇಯೋಭಿವೃದ್ಧಿಗೆ ಮುಂದಾಗಬೇಕು. ಆ ಮೂಲಕ ಮುಂದಿನ ದಿನಗಳಲ್ಲಿ ಷೇರುದಾರರಿಗೆ ಮತ್ತಷ್ಟು ಸೌಲಭ್ಯ ಕಲ್ಪಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಉಪಾಧ್ಯಕ್ಷೆ ಶೈಲಜಾ, ನಿರ್ದೇಶಕರಾದ ಬಿ.ಎಂ.ಗುರುಲಿಂಗಯ್ಯ, ಸತೀಶ್, ನಾಗೇಂದ್ರ, ಚಂದ್ರಣ್ಣ, ರಾಮಚಂದ್ರು, ಬಿ.ಎಸ್.ನಂಜುಂಡಸ್ವಾಮಿ, ಶೈಲಾ, ಸಿ.ಡಿ.ಸಂತೋಷ್, ಎ.ಸಿ.ಕುಮಾರ್, ನಾಗಭೂಷಣ್, ಬಿ.ಎಸ್.ನಾಗರತ್ನಾ ಇತರರಿದ್ದರು.