ಟೂಡಾಗೆ ಬಿ.ಎಸ್.ನಾಗೇಶ್ ಅಧ್ಯಕ್ಷ ; ಹೊರವರ್ತುಲ ರಸ್ತೆ ಶೀಘ್ರ ಪೂರ್ಣಗೊಳಿಸುವ ಭರವಸೆ

28Tmk_Tuda_President_01
Published on

ತುಮಕೂರು: ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ)ದ ನೂತನ ಅಧ್ಯಕ್ಷರಾಗಿ ಬಿ.ಎಸ್.ನಾಗೇಶ್ (ಬಾವಿಕಟ್ಟೆ ನಾಗಣ್ಣ) ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಬಿಜೆಪಿ ಮಾಜಿ ಕಾರ್ಪೊರೇಟರ್ ಬಿ.ಎಸ್.ನಾಗೇಶ್ ಅವರನ್ನು ನೇಮಿಸಿ ಸರ್ಕಾರ ಗುರುವಾರ ಆದೇಶ ಹೊರಡಿಸಿದ್ದು ಶುಕ್ರವಾರ ಮಧ್ಯಾಹ್ನ ನೂರಾರು ಕಾರ್ಯಕರ್ತರೊಂದಿಗೆ ಕಚೇರಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿದರು. ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಬ್ಬಾಕ ರವಿಶಂಕರ್, ಟೂಡಾ ಮಾಜಿ ಸದಸ್ಯ ಜಿ.ಕೆ.ಶ್ರೀನಿವಾಸ್, ರೈತ ಮೋರ್ಚಾದ ಸ್ನೇಕ್ ನಂದೀಶ್ ಮತ್ತಿತರರು ಶುಭ ಕೋರಿದರು.

3 ದಶಕಗಳ ಸೇವೆ: ಪಕ್ಷಕ್ಕಾಗಿ 3 ದಶಕಗಳಿಂದ ದುಡಿದಿದ್ದು 2018ರಲ್ಲಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಷ್ಟಕರ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನನ್ನನ್ನು ಗೆಲ್ಲಿಸುವಲ್ಲಿ ನಾಗೇಶ್ ಶ್ರಮ ಇದೆ. ಕಾರ್ಯಕರ್ತರ ಜತೆ ಉತ್ತಮ ಒಡನಾಟ ಇಟ್ಟುಕೊಂಡು ನಗರದಲ್ಲಿ ಪಕ್ಷ ಸಂಘಟಿಸಿರುವ ಅವರನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡಲಾಗಿದೆ. ಈ ಸ್ಥಾನದಲ್ಲಿ ಕುಳಿತು ಸಾರ್ವಜನಿಕರಿಗೆ ಅನುಕೂಲವಾಗುವ ಸೇವೆಯನ್ನು ಅವರು ಮಾಡಲಿ ಎಂದು ಜ್ಯೋತಿಗಣೇಶ್ ಹಾರೈಸಿದರು.

ಹೊರವರ್ತುಲ ರಸ್ತೆ ಶೀಘ್ರ ಪೂರ್ಣ: ನಗರ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ಹಲವು ಕಾಮಗಾರಿಗಳನ್ನು ಚುರುಕುಗೊಳಿಸಲಾಗುವುದು. ಸಂಸದರು, ಶಾಸಕರ ಮಾರ್ಗದರ್ಶನದಲ್ಲಿ ಗುಬ್ಬಿ ಗೇಟ್ ಹಾಗೂ ಶಿರಾಗೇಟ್‌ವರೆಗಿನ ಹೊರ

ವರ್ತುಲ ರಸ್ತೆಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ನಾಗೇಶ್ ತಿಳಿಸಿದರು.

ಪ್ರಾಧಿಕಾರದ ಅಧಿಕಾರಿಗಳ ಕಿರುಕುಳದಿಂದ ಬೇಸತ್ತಿರುವ ಜನಸಾಮಾನ್ಯರಿಗೆ ಟೂಡಾ ಮೇಲಿನ ಅಸಮಾಧಾನ ಹೊಗಲಾಡಿಸಲು ಆದ್ಯತೆ ನೀಡುತ್ತೇನೆ. ಆ ಮೂಲಕ ಎಲ್ಲರಿಗೂ ಉತ್ತಮ ಸೇವೆ ಒದಗಿಸಲು ಪ್ರಯತ್ನಿಸುತ್ತೇನೆ. ಪಕ್ಷ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದರು.

10ನೇ ಸಾರಥಿ : 1988ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಪ್ರಾಧಿಕಾರಕ್ಕೆ ನಾಗೇಶ್ 10ನೇ ಅಧ್ಯಕ್ಷರಾಗಿದ್ದಾರೆ. ಎ.ದೇವೇಗೌಡ 2 ಬಾರಿ (ಮೇ-ಡಿಸೆಂಬರ್ 1992 , 1993-94), ಅಬ್ದುಲ್ ಮುನಾಫ್ (1996-98), ಮಹಮ್ಮದ್ ಇಕ್ಬಾಲ್ (1998-99), ರೆಡ್ಡಿ ಚಿನ್ನಯೆಲ್ಲಪ್ಪ (2000-03), ಸಿದ್ದಲಿಂಗೇಗೌಡ (2003-05), ಸುಲ್ತಾನ್ ಮಹಮದ್ (2007-08), ಎಸ್.ಆರ್.ಶ್ರೀಧರಮೂರ್ತಿ (2009-13), ಸಿ.ಶಿವಮೂರ್ತಿ (2015-16), ಎಸ್.ರಫೀಕ್ ಅಹ್ಮದ್ (2016-18) ಅಧ್ಯಕ್ಷರಾಗಿದ್ದು ಉಳಿದ ಅವಧಿಯಲ್ಲಿ ಜಿಲ್ಲಾಧಿಕಾರಿಗಳು ಪದನಿಮಿತ್ತ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಶ್ರೀಗಳ ಆಶೀರ್ವಾದ: ಅಧಿಕಾರ ಸ್ವೀಕರಿಸಿದ ಬಳಿಕ ಬಿ.ಎಸ್.ನಾಗೇಶ್ ಅವರು ಸಿದ್ದಗಂಗಾ ಮಠಕ್ಕೆ ತೆರಳಿ ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದರು.

ನಾನು ಎಷ್ಟು ದಿನ ಈ ಸ್ಥಾನದಲ್ಲಿ ಇರುತ್ತೇನೆ ಎನ್ನುವುದಕ್ಕಿಂತ ನಿಷ್ಕಳಂಕವಾಗಿ ನನಗೆ ಪಕ್ಷ ಕೊಟ್ಟ ಜವಾಬ್ದಾರಿ ನಿಭಾಯಿಸಲು ಶಕ್ತಿ ಮೀರಿ ಪ್ರಯತ್ನಿಸುವೆ. ಬಿ.ಎಸ್.ನಾಗೇಶ್ ಟೂಡಾ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net