

ಬೀರೂರು: ಬೀರೂರು ಸಮೀಪದ ಹುಲ್ಲೇಹಳ್ಳಿ ಗ್ರಾಮ ಪಂಚಾಯಿತಿಗೆ ನೂತನವಾಗಿ ಬಿ.ರುದ್ರಪ್ಪ ಅಧ್ಯಕ್ಷರಾಗಿ ಶುಕ್ರವಾರ ಆಯ್ಕೆಯಾದರು.
ಒಟ್ಟು 11 ಸದಸ್ಯ ಬಲ ಹುಲ್ಲೇಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ವೈ.ಪಿ.ಲೋಕೇಶ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಗೆ ಬಿ.ರುದ್ರಪ್ಪ ಮತ್ತು ನರಸಿಂಹಮೂರ್ತಿ ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ನರಸಿಂಹಮೂರ್ತಿ 4 ಮತ ಪಡೆದರೆ ಬಿ.ರುದ್ರಪ್ಪ 7 ಮತ ಪಡೆದು ಜಯಗಳಿಸಿದರು. ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಇಒ ಸಿ.ಆರ್.ಪ್ರವೀಣ್ ಬಿ.ರುದ್ರಪ್ಪ ಅವರ ಆಯ್ಕೆ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಬಿ.ರುದ್ರಪ್ಪ ಮಾತನಾಡಿ, ನನ್ನ ಸದಸ್ಯತ್ವದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಚುನಾವಣೆ ಪ್ರಕ್ರಿಯೆ ನಡೆದಿದೆ. ಮೊದಲು ಅವಿರೋಧ ಆಯ್ಕೆಯಲ್ಲಿ ಅಧ್ಯಕ್ಷರ ಆಯ್ಕೆಯಾಗುತ್ತಿತ್ತು. ಹಾಗಾಗಿ ನನ್ನ ಮೇಲೆ ವಿಶ್ವಾಸದಿಂದ ಮತ ಚಲಾಯಿಸಿ ಆಯ್ಕೆ ಮಾಡಿದ ಸದಸ್ಯರು ಹಾಗೂ ನನ್ನ ಕ್ಷೇತ್ರದ ಜನತೆಗೆ ನಾನು ಚಿರಋಣಿಯಾಗಿದ್ದೇನೆ ಎಂದರು.
ಶಾಸಕ ಕೆ.ಎಸ್.ಆನಂದ್ ಸಹಕಾರ ಪಡೆದು ಗ್ರಾಪಂ ಅಭಿವೃದ್ಧಿಗೆ ಶ್ರಮಿಸಲಾಗುವುದು. ಗ್ರಾಪಂಗೆ ಬೇಕಾದ ಅನುದಾನ ತರಲು ಪ್ರಯತ್ನಿಸುವುದರ ಜತೆಗೆ ಜನತೆಯ ಕುಂದು ಕೊರತೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಾಗುವುದು. ನನಗೆ ದೊರೆತ ಅವಧಿಯಲ್ಲಿ ಪಂಚಾಯಿತಿಯನ್ನು ಆದರ್ಶ ಗ್ರಾಮವಾಗಿ ಮಡಲಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹುಲ್ಲೇಹಳ್ಳಿ ಲಕ್ಷ್ಮಣ್, ಗ್ರಾಮ ಪಂಚಾಯಿತಿ ಸದಸ್ಯರಾದ ಶಾಂತಮ್ಮ, ನಾಗಮ್ಮ, ಮಲ್ಲಾಭೋವಿ, ಪಿಡಿಒ ಮಂಜುನಾಥ್ ಇದ್ದರು.