

ಬೀರೂರು: ಬಿ.ಕೋಡಿಹಳ್ಳಿಗೆ ವಿದ್ಯುತ್ ಸಮರ್ಪಕವಾಗಿ ಪೂರೈಸುವಂತೆ ಒತ್ತಾಯಿಸಿ ಗ್ರಾಮಸ್ಥರು ಮೆಸ್ಕಾಂ ಕಚೇರಿ ಜೆಇ ಯತೀಶ್ ಅವರಿಗೆ ಮನವಿ ಸಲ್ಲಿಸಿದರು.
ರೈತ ಮಂಜುನಾಥ ಮಾತನಾಡಿ, ಗ್ರಾಮಕ್ಕೆ 7 ಗಂಟೆ ವಿದ್ಯುತ್ ನೀಡುವಲ್ಲಿ ಮೆಸ್ಕಾಂ ಅಧಿಕಾರಿಗಳು ವಿಲರಾಗಿದ್ದಾರೆ. ಒಂದು ವಾರದಿಂದ ವಿದ್ಯುತ್ ಪದೇ ಪದೆ ಟ್ರಿಪ್ ಆಗುತ್ತಿದ್ದು, ಸಮಸ್ಯೆ ಪರಿಹಾರಕ್ಕೆ ಲೈನ್‌ಮನ್‌ಗೆ ದೂರವಾಣಿ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ. ಗ್ರಾಮದ ಸುತ್ತಮುತ್ತಲ ಜಮೀನುಗಳಲ್ಲಿ ಮನೆ ಕಟ್ಟಿಕೊಂಡಿರುವ ರೈತರು ಪ್ರತಿದಿನ ಕತ್ತಲಲ್ಲಿ ಬದುಕು ಸಾಗಿಸುವಂತಾಗಿದೆ. ಹಲವು ಬಾರಿ ಕಚೇರಿಗೆ ಬಂದು ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಎ್8 ಲೈನ್‌ನಲ್ಲಿರುವ ಲೈನ್‌ಮನ್‌ಗಳು ರೈತರ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಆದ್ದರಿಂದ ಅವರನ್ನು ವರ್ಗಾಯಿಸಿ ಬೇರೆ ಲೈನ್‌ಮನ್‌ಗಳನ್ನು ನಿಯೋಜನೆ ಮಾಡಬೇಕು ಎಂದು ಒತ್ತಾಯಿಸಿದರು.
ಹೂವಿನಹಳ್ಳಿ ರಂಗನಾಥ್ ಮಾತನಾಡಿ, ಗ್ರಾಮದ ರಸ್ತೆಯಲ್ಲಿರುವ ವಿದ್ಯುತ್ ಪರಿವರ್ತಕ ಸುಟ್ಟು 3 ತಿಂಗಳು ಕಳೆದರೂ ದುರಸ್ತಿಪಡಿಸಿಲ್ಲ. ಸರ್ಕಾರ ರೈತರಿಗಾಗಿ ನೀಡುತ್ತಿರುವ ಭರವಸೆಯನ್ನು ಇಲ್ಲಿನ ಅಧಿಕಾರಿಗಳು ಈಡೇರಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ದೂರಿದರು.
ಮೆಸ್ಕಾಂ ಕಚೇರಿ ಜೆಇ ಯತೀಶ್ ಪತ್ರಿಕೆಗೆ ಮಾಹಿತಿ ನೀಡಿ, ಎ್8 ಲೈನ್ ತೋಟದ ಮಾರ್ಗಗಳಲ್ಲಿದ್ದು, ಆಗಾಗ ತಂತಿಗಳ ಮೇಲೆ ತೆಂಗಿನ ಗರಿ, ಮರದ ರೆಂಬೆ ಬಿದ್ದು ಟ್ರಿಪ್ ಆಗುತ್ತಿರುತ್ತದೆ. ಇದನ್ನು ಪರಿಹರಿಸಲು ಆ ಭಾಗದ ಲೈನ್‌ಮನ್‌ಗೆ ಸೂಚಿಸುತ್ತೇನೆ. ಹೂವಿನಹಳ್ಳಿ ಮಾರ್ಗದಲ್ಲಿರುವ ಟಿಸಿ ಸುಟ್ಟು ಹೋಗಿದ್ದು, ವರದಿ ಸಿದ್ಧಪಡಿಸಲಾಗಿದೆ. ಅದನ್ನೂ ಕೆಲವೇ ದಿನಗಳಲ್ಲಿ ಸರಿಪಡಿಸಲಾಗುವುದು ಎಂದರು.
ಕಳೆದ ವಾರವಷ್ಟೇ ಮೆಸ್ಕಾಂ ಕಚೇರಿಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಪಾಲ್ಗೊಂಡು ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಬಹದಿತ್ತಲ್ಲವೇ ಎಂದು ರೈತರನ್ನು ಪತ್ರಕರ್ತರು ಪ್ರಶ್ನಿಸಿದಾಗ, ಸಭೆ ನಡೆಯುವ ಕುರಿತು ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಗ್ರಾಮಗಳಲ್ಲಿ ಪ್ರಚಾರ ಮಾಡುತ್ತಿಲ್ಲ ಎಂದು ದೂರಿದರು.
ಗ್ರಾಪಂ ಮಾಜಿ ಅಧ್ಯಕ್ಷ ರಂಗಯ್ಯ, ಬಿ.ಕೋಡಿಹಳ್ಳಿ ರೈತರಾದ ಮಂಜಪ್ಪ, ಸೋಮಶೇಖರ್, ಧರಣಿ, ಪ್ರಸನ್ನ, ಶ್ರೀಧರ್, ಪಾಂಡು ಇತರರಿದ್ದರು.