ಬಿ.ಬೆಟ್ಟದಲ್ಲಿ ವಿದ್ಯಾರ್ಥಿನಿಲಯ ಪುನರಾರಂಭಕ್ಕೆ ಸಿದ್ಧತೆ

 ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿರುವ ವಸತಿ ನಿಲಯ ಪ್ರವೇಶಕ್ಕೆ ಬುಡಕಟ್ಟು ಸೋಲಿಗ ಜನಾಂಗದವರು ಸರತಿ ಸಾಲಿನಲ್ಲಿ ಕುಳಿತಿರುವುದು.
ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿರುವ ವಸತಿ ನಿಲಯ ಪ್ರವೇಶಕ್ಕೆ ಬುಡಕಟ್ಟು ಸೋಲಿಗ ಜನಾಂಗದವರು ಸರತಿ ಸಾಲಿನಲ್ಲಿ ಕುಳಿತಿರುವುದು.
Published on

ಯಳಂದೂರು: ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ತಾಲೂಕಿನ ಬಿಳಿಗಿರಿರಂಗನಬೆಟ್ಟದ ವಿಜೆಕೆಕೆಯಲ್ಲಿನ ವಿದ್ಯಾರ್ಥಿನಿಲಯ ಪುನರಾರಂಭಕ್ಕೆ ಸಂಸ್ಥೆಯ ಆಡಳಿತ ಹಾಗೂ ಶಿಕ್ಷಣ ಇಲಾಖೆ ಸಿದ್ಧತೆ ಕೈಗೊಂಡಿದೆ.

ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿನ ವಿಜೆಕೆಕೆಯಲ್ಲಿ ನಡೆಯುತ್ತಿದ್ದ ವಿದ್ಯಾರ್ಥಿ ನಿಲಯ ಕಳೆದ ವರ್ಷ ಸ್ಥಗಿತಗೊಂಡಿತ್ತು. ಪರಿಣಾಮ ಜಿಲ್ಲೆ ಸೇರಿದಂತೆ ಹೊರೆ ಜಿಲ್ಲೆಯ ಸೋಲಿಗ ಸಮುದಾಯದ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಜತೆಗೆ ಶಿಕ್ಷಣ ಪಡೆಯಲು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಬೆಟ್ಟದಲ್ಲಿ ಸೋಲಿಗ ಜನಾಂಗದವರು ಹೆಚ್ಚಿದ್ದು, ಬೆಟ್ಟದ ಪಂಚಾಯಿತಿ ವ್ಯಾಪ್ತಿಯಲ್ಲಿನ ಬಂಗ್ಲೆಪೋಡು, ಯರಕನಗದ್ದೆ, ಮಂಜಿಗುಂಡಿ, ಹೊಸಪೋಡು, ಕಲ್ಯಾಣಿ ಪೋಡು, ಮುತ್ತುಗದ ಗದ್ದೆ ಪೋಡು, ಪುರಾಣಿಪೋಡು ಸೇರಿದಂತೆ ಅನೇಕ ಕಡೆ ಇವರು ಕಾಣ ಸಿಗುತ್ತಾರೆ. ಈ ಹಿಂದೆ ಇವರು ನಗರ, ಪಟ್ಟಣದವರ ಸಂಪರ್ಕಕ್ಕೆ ಬರಲು ಹೆದರುತ್ತಿದ್ದ ಕಾಲವಿತ್ತು. ಆ ಬಳಿಕ ಹಂತ ಹಂತವಾಗಿ ಇವರಿಗೆ ಶಿಕ್ಷಣ ಹಾಗೂ ಆರೋಗ್ಯ ನೀಡುವ ನಿಟ್ಟಿನಲ್ಲಿ ಡಾ. ಸುದರ್ಶನ್ ನೇತೃತ್ವದಲ್ಲಿ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ ಇಲ್ಲಿ ಆರಂಭವಾಯಿತು.

ಈ ಶಾಲೆಯ ಕ್ಯಾಂಪಸ್‌ನಲ್ಲೇ ವಸತಿ ನಿಲಯವೂ ಇತ್ತು. ಸ್ಥಳೀಯ ಸೋಲಿಗರಲ್ಲದೆ ಹನೂರು, ಕೊಳ್ಳೇಗಾಲ, ಚಾಮರಾಜನಗರ, ಎಚ್.ಡಿ. ಕೋಟೆ, ಹುಣಸೂರು, ಮೈಸೂರು, ಕೊಡಗು ಜಿಲ್ಲೆಯಲ್ಲಿರುವ ಸೋಲಿಗ ಸಮುದಾಯದವರು ತಮ್ಮ ಮಕ್ಕಳನ್ನು ವಸತಿ ನಿಲಯಕ್ಕೆ ಸೇರಿಸಿದ್ದು, ಸಾವಿರಾರು ಮಕ್ಕಳು ಇಲ್ಲಿ ಶಿಕ್ಷಣ ಪಡೆದಿದ್ದಾರೆ.

ಕೆಡಿಪಿ ಸಭೆಯಲ್ಲಿ ಗಮನ: ವಿಜೆಕೆಕೆಯ ವಿದ್ಯಾರ್ಥಿನಿಲಯ ಸ್ಥಗಿತ ಎಂಬ ಶೀರ್ಷಿಕೆಯಡಿ 2024ರ ನ.20 ರಂದು ಸುದ್ದಿ ಪ್ರಕಟವಾಗಿತ್ತು. ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅಧ್ಯಕ್ಷತೆಯಲ್ಲಿ ಜಿಲ್ಲೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಈ ಸಂಬಂಧ ಸಭೆಯಲ್ಲಿ ಗಮನ ಸೆಳೆದಿದ್ದರು. ಆ ಬಳಿಕ ಜಿಲ್ಲಾಮಟ್ಟದ ಅಧಿಕಾರಿಗಳು ಎಚ್ಚರವಹಿಸಿದ್ದು, ಇದೀಗ ವಸತಿ ನಿಲಯ ತೆರೆಯುವ ಮೂಲಕ ಸೋಲಿಗ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಿದ್ದಾರೆ.

ವಿಜೆಕೆಕೆಯ ಶಾಲೆಯಲ್ಲಿ 1 ರಿಂದ 10 ನೇ ತರಗತಿವರೆಗೂ ಸುಮಾರು 210 ಕ್ಕೂ ವಿದ್ಯಾರ್ಥಿಗಳಿದ್ದಾರೆ. ಆದರಲ್ಲಿ ಈಗಾಗಲೇ 5 ವಿದ್ಯಾರ್ಥಿಗಳು ನಿಲಯಕ್ಕೆ ಅರ್ಜಿ ಸಲ್ಲಿಸಿದ್ದು, ಉಳಿದ ವಿದ್ಯಾರ್ಥಿಗಳ ಫೈಕಿ ಎಷ್ಟು ಜನರು ಅರ್ಜಿ ಸಲ್ಲಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ. ಜತೆಗೆ ಈ ಬಾರಿ ವಸತಿ ಹಾಗೂ ಶಾಲೆಯಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಸಿದ್ಧತೆ ನಡೆಸಲಾಗಿದೆ. ಇದರೊಂದಿಗೆ ದೂರು ಪೆಟ್ಟಿಗೆಯನ್ನೂ ಇಡಲಾಗಿದ್ದು, ಮಕ್ಕಳ ಸಹಾಯವಾಣಿ ಸಂಖ್ಯೆ ನಮೂದಿಸಲಾಗಿದೆ. ಇದರೊಂದಿಗೆ ಸ್ವಚ್ಛತೆ, ಮೂಲಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಆಡಳಿತ ಮಂಡಳಿಯ ನಿರ್ಧಾರದಿಂದ ಬಿಳಿಗಿರಿರಂಗನಬೆಟ್ಟದಲ್ಲಿ ವಸತಿ ನಿಲಯ ವ್ಯವಸ್ಥೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ವಸತಿ ನಿಲಯ ಮರು ಆರಂಭಿಸುವ ಬಗ್ಗೆ ಸಾಕಷ್ಟು ಬಾರಿ ಸಾರ್ವಜನಿಕರು, ಸ್ಥಳೀಯ ಮುಖಂಡರು ಹಾಗೂ ಆಡಳಿತ ಮಂಡಳಿಯೊಂದಿಗೆ ಚರ್ಚಿಸಲಾಗಿತ್ತು. ಕೇಂದ್ರ ಸರ್ಕಾರದ ಪರಿಶಿಷ್ಟ ಪಂಗಡಗಳ ಅನುದಾನದಲ್ಲಿ ನಿಲಯವನ್ನು ಮತ್ತೆ ಪ್ರಾರಂಭ ಮಾಡುವ ನಿಟ್ಟಿನಲ್ಲಿ ವಿಜಿಕೆಕೆ ಮುಂದಾಗಿದ್ದು, ಇದರಿಂದ ಇಲ್ಲಿನ ಸೋಲಿಗ, ಇತರ ಬುಡಕಟ್ಟು ಮಕ್ಕಳ ಕಲಿಕೆಗೆ ಹೆಚ್ಚಿನ ಅನುಕೂಲವಾಗಲಿದೆ.

ಮಾರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಯಳಂದೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net