

ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ವಿತರಿಸುವ ಪರಿಹಾರದಲ್ಲಿ ತಾರತಮ್ಯ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಮಂಗಳವಾರ ಕಟ್ಟಡ ತೆರವುಗೊಳಿಸಲು ಬಂದ ಅಧಿಕಾರಿಗಳ ವಿರುದ್ಧ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು.
ಅಂತೆಯೆ ಸ್ಥಳಕ್ಕಾಗಮಿಸಿದ ಶ್ರೀರಂಗಪಟ್ಟಣ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ಸಂತ್ರಸ್ತರ ಪರವಾಗಿ ನಿಂತು ಸಮಸ್ಯೆ ಇತ್ಯರ್ಥವಾಗುವವರೆಗೂ ಕಾಮಗಾರಿ ಮಾಡದಂತೆ ಸೂಚನೆ ನೀಡಿದರು.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಡಿಸೆಂಬರ್‌ನಲ್ಲಿ ನಡೆಯಲಿರುವ ಬೆಳಗಾವಿ ಅಧಿವೇಶನದಲ್ಲಿ ನಿಯಮ 69 ರಡಿ ಚರ್ಚಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ರಾಜ್ಯದ ಹೆಮ್ಮೆ. ರಸ್ತೆ ನಿರ್ಮಾಣಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ. ಆದರೆ, ಭೂಮಿ ಕಳೆದುಕೊಳ್ಳುವ ರೈತರು ಹಾಗೂ ಕಟ್ಟಡ ಮಾಲೀಕರಿಗೆ ವಂಚಿಸುವ ಕ್ರಮವನ್ನು ಸಹಿಸಲಾಗುವುದಿಲ್ಲ ಎಂದು ಶಾಸಕರು ಎಚ್ಚರಿಸಿದರು.
ರೈತರು ಹಾಗೂ ಸಾರ್ವಜನಿಕರ ದೂರಿನ ಮೇರೆಗೆ ಗ್ರಾಮಕ್ಕೆ ಭೇಟಿ ನೀಡಿದಾಗ ವಾಣಿಜ್ಯ ಮಳಿಗೆಗಳ ಕಟ್ಟಡಕ್ಕೆ ಕಡಿಮೆ ಪರಿಹಾರ ನಿಗದಿಪಡಿಸಿರುವುದು ತಿಳಿದು ಬಂದಿದೆ. ಬಾಬುರಾಯನಕೊಪ್ಪಲು ಗ್ರಾಮದ ರೈತರ ಜಮೀನಿನಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಿದ್ದು, ಕಳೆದೊಂದು ವರ್ಷದಿಂದ ಪರಿಹಾರ ನೀಡಲು ಮುಂದಾಗಿಲ್ಲ. ಅನ್ಯಕ್ರಾಂತ ಮಂಜೂರಾಗದ ಆರ್‌ಟಿಸಿ ಜಮೀನುಗಳಿಗೆ ಕೋಟ್ಯಂತರ ರೂ. ನೀಡಿ ರೈತರು ಹಾಗೂ ಸರ್ಕಾರಕ್ಕೆ ವಂಚಿಸಲಾಗಿದೆ. ಇದನ್ನು ಸದನದಲ್ಲಿ ಪ್ರಶ್ನಿಸಿ ಸಿಬಿಐ ತನಿಖೆಗೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಹೆದ್ದಾರಿ ನಿರ್ಮಾಣದ ಬಿಡದಿ, ರಾಮನಗರ, ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಆರೇಳು ಜನ ದಲ್ಲಾಳಿಗಳು ರೈತರಿಗೆ ವಂಚಿಸಿರುವ ಪ್ರಕರಣಗಳು ಕಂಡು ಬಂದಿದೆ. 35 ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲೆ ದೊರೆತಿದ್ದು, ನೂರಾರು ಕೋಟಿ ರೂ. ಅವ್ಯವಹಾರವಾಗಿರುವ ಶಂಕೆ ಇದೆ. ಹಿಂದಿನ ಜಿಲ್ಲಾಧಿಕಾರಿ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳ ಸಹಕಾರದಿಂದ ಕೆಲ ದಲ್ಲಾಳಿಗಳಿಗೆ ಸುಗ್ಗಿಯಾಗಿದ್ದು, ಈ ಅಕ್ರಮದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೂ ಚರ್ಚಿಸಲಾಗಿದೆ. ಕೆಡಿಪಿ ಹಾಗೂ ಸದನದಲ್ಲಿಯೂ ಒಮ್ಮೆ ಚರ್ಚಿಸಲಾಗಿದ್ದು, ಮುಂದಿನ ಅಧಿವೇಶನದಲ್ಲಿ ತಾರ್ಕಿಕ ಹಂತಕ್ಕೆ ಕೊಂಡೊಯ್ಯಲಾಗುವುದು ಎಂದರು.
57 ಚ.ಸೆಂ.ಮೀಗೆ 7 ಲಕ್ಷ ರೂ., 500 ಚ.ಸೆಂ.ಮೀಗೆ 12 ಲಕ್ಷ ರೂ. ನಿಗದಿಪಡಿಸಿರುವುದು ಸಾಬೀತಾಗಿದೆ. ಹೆದ್ದಾರಿ ವ್ಯಾಪ್ತಿಯ ಗೌಡಹಳ್ಳಿ ಮತ್ತು ಊರಮಾರಕಸಲಗೆರೆ ಬಳಿ ಅಂಡರ್ ಪಾಸ್ ನಿರ್ಮಿಸದೆ ಅವೈಜ್ಞಾನಿಕ ಕಾಮಗಾರಿ ಕೈಗೊಂಡಿರುವುದು ಸರಿಯಲ್ಲ. ಒಂದು ವೇಳೆ ಪೊಲೀಸ್ ಬಲ ಬಳಸಿ ರೈತರನ್ನು ಹೆದರಿಸಿ ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಈ ಸಂಬಂಧ ಅಧಿಕಾರಿಗಳು ಹಾಗೂ ರೈತರ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗೆ ಈ ಹಿಂದೆ ಮನವಿ ಮಾಡಲಾಗಿದೆ. ಅದು ಕಾರ್ಯರೂಪಕ್ಕೆ ಬಂದಿಲ್ಲ. ಸಭೆಯ ತೀರ್ಮಾನದ ನಂತರ ಸ್ವಾಧೀನಕ್ಕೆ ಮುಂದಾಗಲಿ ಎಂದು ಸಲಹೆ ನೀಡಿದರು.
ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಕಾಳೇಗೌಡ, ರೈತ ಮುಖಂಡ ಚಂದ್ರಶೇಖರ್, ಇಂಡವಾಳು ಸಿದ್ದೇಗೌಡ ಇತರರಿದ್ದರು.