

ರಾಣೆಬೆನ್ನೂರ: ರಾಣೆಬೆನ್ನೂರ ಸೇರಿ ಜಿಲ್ಲೆಯಲ್ಲೀಗ ಬಿ ಖಾತೆಯದೇ ಸದ್ದು. ಇಷ್ಟುದಿನ ಖಾತೆ ಸಿಗದೆ ತೊಂದರೆಗೆ ಸಿಲುಕಿದ್ದ ಆಸ್ತಿ ಮಾಲೀಕರಿಗೆ ಬಿ ಖಾತೆ ಮಾಡಿಸಿಕೊಳ್ಳುವಂತೆ ಪ್ರಚಾರ ಮಾಡಲಾಗುತ್ತಿದೆ. ಆದರೆ, ಇದರಿಂದ ಏನು ಪ್ರಯೋಜನ? ಎಂಬುದರ ಬಗ್ಗೆ ಸರಿಯಾದ ಸ್ಪಷ್ಟನೆ ಇಲ್ಲ. ಹೀಗಾಗಿ, ತಮ್ಮದಲ್ಲದ ತಪ್ಪಿಗೆ ಇದ್ಯಾವ ಶಿಕ್ಷೆ ಎನ್ನುವಂತಾಗಿದೆ ಆಸ್ತಿ ಮಾಲೀಕರ ಸ್ಥಿತಿ.
ರಾಜ್ಯದ ಎಲ್ಲ ನಗರ, ಪಟ್ಟಣ ಪ್ರದೇಶಗಳಲ್ಲಿ ಕಂದಾಯ ಭೂಮಿಯಲ್ಲಿನ ಅನಧಿಕೃತ ಬಡಾವಣೆಗಳು ಹಾಗೂ ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಿಸಿದ ಕಟಡಗಳಿಗೆ ಬಿ ಖಾತೆ ನೀಡಿ, ಆಸ್ತಿ ತೆರಿಗೆ ಸಂಗ್ರಹಿಸುವ ಮಹತ್ವದ ನಿರ್ಣಯವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಇದರ ಬೆನ್ನಲ್ಲೇ ಜನರಲ್ಲಿ ನಾನಾ ಗೊಂದಲಗಳಿಗೂ ಕಾರಣವಾಗಿದೆ. ಅನಧಿಕೃತ ನಿವೇಶನಗಳಿಗೆ ಇದೆ ಅಂತಿಮ ಅವಕಾಶ ಎಂದು 90 ದಿನ ಕಾಲಾವಕಾಶ ನೀಡಿ, ಬಿ ಖಾತೆ ನೀಡಲು ಮುಂದಾಗಿರುವುದು ಆಸ್ತಿ ಮಾಲೀಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಅಸಹಾಯಕ ಸ್ಥಿತಿ...
ನಗರ ವ್ಯಾಪ್ತಿಯಲ್ಲಿ ಈಗಾಗಲೇ ಬಹಳಷ್ಟು ಬಡಾವಣೆಗಳು ನಿರ್ಮಾಣವಾಗಿದ್ದು, ಜನರು ನಿವೇಶನ ಖರೀದಿಸಿದ್ದಾರೆ. ಆದರೆ, ಬಹಳಷ್ಟು ಆಸ್ತಿಗೆ ಅನುಮೋದನೆಯೇ ಸಿಕ್ಕಿಲ್ಲ. ಅಭಿವೃದ್ಧಿಪಡಿಸಿ ಆಸ್ತಿ ಮಾರಿರುವ ಮಾಲೀಕರು ಕೈತೊಳೆದುಕೊಂಡು ಕೂತಿದ್ದಾರೆ. ಪಕ್ಕಾ ದಾಖಲೆ ನಿರೀಕ್ಷೆಯಲ್ಲಿದ್ದ ಸಾವಿರಾರು ಆಸ್ತಿ ಮಾಲೀಕರು ಖಾತೆಗಾಗಿ ಸ್ಥಳೀಯ ಸಂಸ್ಥೆಗಳಿಗೆ ಅಲೆದಾಡಿದ್ದರು. ಆದರೀಗ ಅವರಿಗೆಲ್ಲ ಬಿಖಾತೆಯೆ ಗಟ್ಟಿ ಎನ್ನುವ ಸ್ಥಿತಿ ನಿರ್ಮಾಣವಾಗಿದ್ದು, ದುಡ್ಡು ಕೊಟ್ಟು ಆಸ್ತಿ ಖರೀದಿಸಿದರೂ ಪಕ್ಕಾ ದಾಖಲೆ ಪಡೆಯಲಾಗದ ಅಸಹಾಯಕ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಬಿ ಖಾತೆಯಿಂದ ಏನು ಪ್ರಯೋಜನ ಎಂಬುದೇ ಈಗ ಗೊಂದಲದ ಗೂಡಾಗಿದೆ.
ಎ ಖಾತೆ ಬಿ ಖಾತೆ ಎಂದರೇನು...?
ಮುಖ್ಯವಾಗಿ ಆಸ್ತಿ ದಾಖಲೆಗಳನ್ನು ಎ ಖಾತಾ ಹಾಗೂ ಬಿ ಖಾತಾ ಎಂದು ವಿಂಗಡಿಸಿರುತ್ತಾರೆ. ಎ ಖಾತೆ ಎಂದರೆ ಅಧಿಕೃತ, ಬಿ ಖಾತೆ ಎಂದರೆ ಅನಧಿಕೃತ ಎಂಬುದು ಸ್ಪಷ್ಟ, ಸೂಕ್ತ ದಾಖಲೆಗಳ ಕೊರತೆ ಇರುವ ಕಾರಣ ಬಿ ಖಾತೆ ನೀಡಲಾಗುತ್ತಿದೆ. ಆಸ್ತಿ ತೆರಿಗೆ ಸಂಗ್ರಹ ಪ್ರಕ್ರಿಯೆಯನ್ನು ಸುಲಭವಾಗಿಸುವ ಉದ್ದೇಶದಿಂದ ಎ ಖಾತಾ ಹಾಗೂ ಬಿ ಖಾತಾ ಎನ್ನುವ ವಿಂಗಡಣೆ ಮಾಡಲಾಗುತ್ತಿದೆ. ಎ ಖಾತಾದಡಿ ಬರುವ ಆಸ್ತಿ ಸಂಪೂರ್ಣ ಕಾನೂನು ಬದ್ದವಾಗಿರುತ್ತದೆ. ಇನ್ನು ಬಿ ಖಾತಾದಲ್ಲಿ ಬರುವ ಆಸ್ತಿಯು ಅರೆ ಕಾನೂನು ಇಲ್ಲವೆ ಕಾನೂನು ಬಾಹಿರ ಎಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕಾಗಿಯೆ ಬಿ ಖಾತಾಗಿಂತಲೂ ಎ ಖಾತಾಗೆ ಬೇಡಿಕೆಯೂ ಹೆಚ್ಚು ಹಾಗೂ ಕಾನೂನಿನ ಮಾನ್ಯತೆಯೂ ಹೆಚ್ಚು.
ಎ ಖಾತಾಗೆ ಹಲವು ಸೌಲಭ್ಯ...
ಎ ಖಾತಾ ಇದ್ದರೆ ಆಸ್ತಿ ಸಂಬಂಧಿಸಿದಂತೆ ವ್ಯಾಪಾರ ಪರವಾನಗಿ, ಕಟ್ಟಡಗಳ ನಿರ್ಮಾಣಕ್ಕೆ ಪರವಾನಗಿ, ಕಟ್ಟಡ ಯೋಜನೆಗೆ ಸಂಬಂಧಿಸಿದ ಅನುಮೋದನೆ ಹಾಗೂ ಬ್ಯಾಂಕ್‌ಗಳಿಂದ ಸಾಲ ಸೇರಿದಂತೆ ಹಲವು ಸೌಲಭ್ಯಗಳು ಸಿಗಲಿವೆ.
ಬಿ ಖಾತೆಗೆ ಸೌಲಭ್ಯ ಅಷ್ಟಕಷ್ಟೇ... ಆಸ್ತಿಯು ಬಿ ಖಾತಾ ದಾಖಲೆ ಪತ್ರಗಳ ಅಡಿಯಲ್ಲಿದ್ದರೆ, ಅದನ್ನು ಕಾನೂನು ಬಾಹಿರ ಎಂದು ಪರಿಗಣಿಸಲಾಗುತ್ತದೆ. ಬಿ ಖಾತಾದಲ್ಲಿ ಸರ್ಕಾರಿ ನಿಯಮಗಳ ಉಲ್ಲಂನೆಯಾಗಿರುತ್ತದೆ. ಪ್ರಮುಖವಾಗಿ ಬಿ ಖಾತಾದಲ್ಲಿ ಅನಧಿಕೃತ ವಿನ್ಯಾಸಗಳು, ಪೂರ್ಣವಾಗದ ರಚನೆ ಹಾಗೂ ನಿಯಮ ಉಲ್ಲಂಘನೆ ಮಾಡಿ ಕಟ್ಟಡದ ನಿರ್ಮಾಣ ಸೇರಿ ಹಲವು ಅಂಶಗಳು ಇರಲಿವೆ. ಹೀಗಾಗಿ ಎ ಖಾತೆಯಂತೆ ಸರ್ಕಾರದ ಸೌಲಭ್ಯಗಳನ್ನು ಪಡೆಯುವುದು ಕಷ್ಟವಾಗಲಿದೆ. ಕೆಲವು ಬ್ಯಾಂಕ್‌ಗಳು ಸಾಲ ಕೊಡಲು ಹಿಂಜರಿಯುತ್ತವೆ. ಮುಂದಿನ ದಿನಗಳಲ್ಲಿ ಬಿ ಖಾತೆ ಹೊಂದಿರುವ ಖಾತೆದಾರರು ಎ ಖಾತೆಗೆ ಅಗತ್ಯವಾದ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಆದರೆ, ಬಿ ಖಾತೆ ಹೊಂದಿದ್ದರೆ ಮಾತ್ರ ಅದೆ ಅಂತಿಮ ಎನ್ನುವಂತಿಲ್ಲ. ಅದು ಅಷ್ಟು ಸುಲಭವೂ ಅಲ್ಲ. ಸದ್ಯ ಬಿ ಖಾತೆ ಮಾಡಿಸಿಕೊಳ್ಳಲು ಬಹಳಷ್ಟು ತೆರಿಗೆ ಕಟ್ಟಬೇಕು. ತೆರಿಗೆ ಕಟ್ಟಿದರೂ ನಿಮಗೆ ಪಕ್ಕಾ ದಾಖಲೆ ಸಿಗಲ್ಲ. ಹೀಗಾಗಿ ಸೂಕ್ತ ದಾಖಲೆಗಳಿಲ್ಲದ ಆಸ್ತಿ ಮಾಲೀಕರಿಗೆ ಬಿ ಖಾತೆ ಎಂಬುದು ಬಿಸಿತುಪ್ಪವಾಗಿ ಪರಿಣಮಿಸಿದೆ.
ದಾಖಲೆಗಳ ಕೊರತೆಯಿಂದ ಖಾತೆ ಸಿಗದವರು, ಲಭ್ಯ ದಾಖಲೆಗಳನ್ನು ಕೊಟ್ಟು ಬಿ ಖಾತೆ ಪಡೆಯಲು ಅವಕಾಶ ನೀಡಲಾಗುತ್ತಿದೆ. ಆಸ್ತಿ ತೆರಿಗೆ ಪಾವತಿಸಿ ಬಿ ಖಾತೆ ಪಡೆಯಬಹುದು. ಕೀರಪ್ಪ ಇಂಗಳಗಿ, ನಗರಸಭೆ ಅಧ್ಯಕ್ಷ ನೂರಾರು ಜನ ತಮ್ಮದಲ್ಲದ ತಪ್ಪಿಗೆ ಆಸ್ತಿ ಖರೀದಿಸಿ ತೊಂದರೆಗೆ ಸಿಲುಕಿದ್ದಾರೆ. ಲೇಔಟ್ ಮಾಲೀಕರು, ಅಧಿಕಾರಿಗಳು ಮಾಡಿರುವ ತಪ್ಪಿನಿಂದ ದುಡ್ಡು ಕೊಟ್ಟು ಈಗ ಬಿ ಖಾತೆ ಪಡೆಯುವ ಪರಿಸ್ಥಿತಿ ಬಂದಿದೆ. ಅನಧಿಕೃತ ಎಂಬುದಕ್ಕೆ ನೀಡುತ್ತಿರುವ ದಾಖಲೆ ರೀತಿ ಇದು ಭಾಸವಾಗುತ್ತಿದೆ. ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಹನುಮಂತಪ್ಪ ಕೆ., ಸಾಮಾಜಿಕ ಕಾರ್ಯಕರ್ತ