ಬಿಜೆಪಿ ರಣಹೇಡಿಯಂತೆ ಸೇಡಿನ ರಾಜಕೀಯ ಮಾಡುತ್ತಿದೆ ಬಿ.ಕೆ.ಹರಿಪ್ರಸಾದ್ ಆರೋಪ

B K
Published on

ಮಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಭಯದಿಂದ ರಣಹೇಡಿಯಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ. ಇದರ ವಿರುದ್ಧ ಕಾನೂನಾತ್ಮಕವಾಗಿ ಹಾಗೂ ರಾಜಕೀಯವಾಗಿ ಕಾಂಗ್ರೆಸ್ ಧ್ವನಿ ಎತ್ತಲಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯು ನಿರಂಕುಶಾಧಿಪತ್ಯದ ದಾರಿಯಲ್ಲಿ ಸಾಗುತ್ತಿರುವುದು ಸಾಬೀತಾಗಿದ್ದು, ಈ ಮೂಲಕ ಪ್ರಜಾಪ್ರಭುತ್ವದ ನೀತಿ ಸಂಹಿತೆಯನ್ನು ಗಾಳಿಗೆ ತೂರಲಾಗಿದೆ ಎಂದವರು ಶನಿವಾರ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕೋರ್ಟ್ ಶಿಕ್ಷೆ ವಿಧಿಸಿ ಮೇಲ್ಮನವಿಗೆ 30 ದಿನಗಳ ಕಾಲಾವಕಾಶ ನೀಡಿದೆ. ಹೀಗಿರುವಾಗ, ಆದೇಶ ಪ್ರಕಟಿಸಿದ ಒಂದೇ ದಿನದಲ್ಲಿ ಈ ರೀತಿಯ ಸೇಡಿನ ರಾಜಕೀಯ ಮಾಡಿರುವುದು ರಾಹುಲ್ ಗಾಂಧಿ ಕುರಿತಾದ ಭಯ 56 ಇಂಚಿನ ನರೇಂದ್ರ ಮೋದಿ ರಣಹೇಡಿ ಎಂಬುದನ್ನು ಸಾಬೀತು ಪಡಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸೌಹಾರ್ದವನ್ನು ಕೆಡಿಸುವ ಹೇಳಿಕೆ ನೀಡಿದಾಗ, ನರಮೇಧಕ್ಕೆ ಕರೆ ಕೊಟ್ಟವರ ಬಗ್ಗೆ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕಾದ ಸರ್ಕಾರ ಏನೂ ಮಾಡದೆ 138 ವರ್ಷಗಳ ಇತಿಹಾಸವಿರುವ ರಾಜಕೀಯ ಪಕ್ಷವೊಂದರ ನಾಯಕನ ರಾಜಕೀಯ ಭಾಷಣದ ಮೇಲಿನ ಸೇಡಿನ ರಾಜಕಾರಣವು ಬಿಜೆಪಿಗೆ ಪ್ರಜಾಪ್ರಭುತ್ವದ ಮೇಲಿನ ಗೌರವನ್ನು ತೋರಿಸಿದೆ ಎಂದು ಬಿ.ಕೆ. ಹರಿಪ್ರಸಾದ್ ಅವರು ಅಸಮಾಧಾನ ವ್ಯಕ್ತಪಡಿಸಿದರು.


2 ಬಿ ಮೀಸಲಾತಿಯಿಂದ ಮುಸ್ಲಿಂ ಸಮುದಾಯವನ್ನು ಕೈಬಿಡುವ ರಾಜ್ಯ ಸರ್ಕಾರದ ನಿರ್ಣಯದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಸಂಪೂರ್ಣ ಮೀಸಲಾತಿಯನ್ನೇ ರದ್ದುಗೊಳಿಸುವ ಹುನ್ನಾರ ಎಂದರು.


ದ.ಕ. ಜಿಲ್ಲೆಯ ಎಂಟು ಸ್ಥಾನಗಳಲ್ಲಿ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳ ಘೋಷಣೆಯಲ್ಲಿ ಪಕ್ಷದಲ್ಲಿ ಯಾವುದೇ ಕಗ್ಗಂಟು ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ, ಮುಖಂಡರಾದ ಶಶಿಧರ ಹೆಗ್ಡೆ, ಜೆ.ಆರ್. ಲೋಬೋ, ಸಂತೋಷ್ ಕುಮಾರ್, ಇಬ್ರಾಹೀಂ ಕೋಡಿಜಾಲ್, ಲಾರೆನ್ಸ್, ಅನ್ವಿತ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net