

ಮಂಡ್ಯ: ತಾಲೂಕಿನ ಬಿ.ಹೊಸೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಬಿ.ಸಿ.ಕೃಷ್ಣೇಗೌಡ ಮತ್ತು ಉಪಾಧ್ಯಕ್ಷರಾಗಿ ಪವಿತ್ರಾ ಆಯ್ಕೆಯಾಗಿದ್ದಾರೆ.
21 ಸದಸ್ಯ ಬಲದ ಆಡಳಿತ ಮಂಡಳಿಯ ನೂತನ ವರಿಷ್ಠರ ಆಯ್ಕೆಗೆ ಚುನಾವಣೆ ಗ್ರಾಪಂ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಕೃಷ್ಣೇಗೌಡ ಹಾಗೂ ಎಚ್.ಎನ್.ಪುಟ್ಟಸ್ವಾಮಿ ನಾಮಪತ್ರ ಸಲ್ಲಿಸಿದರು. ನಂತರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಎಚ್.ಎನ್.ಪುಟ್ಟಸ್ವಾಮಿಗೆ 6 ಮತ್ತು ಬಿ.ಸಿ.ಕೃಷ್ಣೇಗೌಡ ಪರವಾಗಿ 13 ಮತಗಳು ಚಲಾವಣೆಗೊಂಡವು. ಒಬ್ಬರು ಗೈರಾದರೆ, ಮತ್ತೊಂದು ಮತ ಅನರ್ಹಗೊಂಡಿತು. ಅಂತಿಮವಾಗಿ 7 ಮತದ ಅಂತರದಲ್ಲಿ ಕೃಷ್ಣೇಗೌಡ ಗೆಲುವು ಸಾಧಿಸಿದರು. ಇತ್ತ ಉಪಾಧ್ಯಕ್ಷ ಸ್ಥಾನಕ್ಕೆ ಪವಿತ್ರಾ ಹೊರತುಪಡಿಸಿ ಮತ್ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯೂ ಆದ ಪಂಚಾಯತ್ ರಾಜ್ ಇಲಾಖೆ ಎಇಇ ಶ್ರೀನಿವಾಸ್ ಅವಿರೋಧದ ಆಯ್ಕೆ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯನ್ನು ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಅಭಿನಂದಿಸಿದರು. ಗ್ರಾಪಂ ಸದಸ್ಯರಾದ ಗಾಯತ್ರಿ, ಸುಮಾ, ಅನಿತಾ, ಪುಟ್ಟೇಗೌಡ, ಭಾಗ್ಯಮ್ಮ, ಶಂಕರಾಚಾರಿ, ಗೌರಮ್ಮ, ದಿವ್ಯಾ, ಶೋಭಾ, ಬೋರಯ್ಯ, ಕುಮಾರ್, ಮುಖಂಡ ಪ್ರತಾಪ್ ಇತರರಿದ್ದರು.