

ಅರಕೇರಾ: ಬಿ.ಗಣೇಕಲ್ ಗ್ರಾಪಂ ವ್ಯಾಪ್ತಿಯಲ್ಲಿ ಪಿಡಿಒ ನಿರ್ಲಕ್ಷೃದಿಂದ ಉದ್ಯೋಗ ಖಾತ್ರಿ ಯೋಜನೆ ನಿರ್ದಿಷ್ಟ ಉದ್ದೇಶ ಈಡೇರುತ್ತಿಲ್ಲ ಎಂದು ಗ್ರಾಮೀಣ ಕೂಲಿಕಾರರ ಸಂಘಟನೆ ಗ್ರಾಮ ಘಟಕ ಅಧ್ಯಕ್ಷ ಬಾಲಯ್ಯ ದೊರೆ ಆರೋಪಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆಯಡಿ ಏ.1 ರಿಂದ ಕೆಲಸ ನೀಡಬೇಕು. ಆದರೆ, ಈವರೆಗೆ ಕೂಲಿಕಾರರಿಗೆ ಕೆಲಸ ನೀಡುತ್ತಿಲ್ಲ. ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಗ್ರಾಪಂ ಕಚೇರಿಗೆ ಅಲೆದಾಡಬೇಕಿದೆ. ಪಿಡಿಒ ಮತ್ತು ಸಿಬ್ಬಂದಿ ಕಚೇರಿಯಲ್ಲಿರದೆ ಕೂಲಿಕಾರರನ್ನು ಸತಾಯಿಸುತ್ತಿದ್ದಾರೆ. ಪಿಡಿಒಗೆ ಕರೆ ಮಾಡಿದರೂ ಸ್ಪಂದಿಸಲ್ಲ. ಇ-ಹಾಜರಾತಿ ಪಾಲಿಸದೆ ಸರ್ಕಾರದ ನಿಯಮವನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿದರು.
ಕಳೆದ ನಾಲ್ಕು ತಿಂಗಳಿಂದ ಹೊಸ ಜಾಬ್ ಕಾರ್ಡ್ ರಚನೆ, ಡಿಲಿಟ್, ಸ್ಥಳಾಂತರ ಮಾಡುವುದು ಸೇರಿ ಇತರ ಜಾಬ್‌ಕಾರ್ಡ್‌ಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿಲ್ಲ. ಹೀಗಾಗಿ ಕೂಲಿ ಕಾರ್ಮಿಕರು ಗುಳೆ ಹೋಗುವ ಪರಿಸ್ಥಿತಿ ಬಂದಿದೆ. 15ನೇ ಹಣಕಾಸು ಯೋಜನೆ ಅನುದಾನ ದುರ್ಬಳಕೆ ಆಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ಕುಡಿವ ನೀರು ಪೂರೈಕೆಗೆ ಬಳಸಬೇಕಾದ ಅನುದಾನವನ್ನು ಅವರಿಗೆ ಬೇಕಾದ ಏಜೆನ್ಸಿಗಳಿಗೆ ಹಣ ಸಂದಾಯ ಮಾಡಿಕೊಂಡಿದ್ದಾರೆ.
ತೆರಿಗೆ ಸಂಗ್ರಹ, ಕೃಷಿ ಹೊಂಡ, ಬದು ನಿರ್ಮಾಣ, ದನದ ಶೆಡ್ ನಿರ್ಮಾಣ ಸೇರಿ ಗ್ರಾಪಂಗೆ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸದೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತು ತಾಪಂ ಇಒ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು. ಒಂದು ವೇಳೆ ನಿರ್ಲಕ್ಷಿಸಿದರೆ ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಹಾಜಿ ಮಸ್ತಾನ್, ಆಂಜನೇಯ ಅಬಕಾರಿ ಇದ್ದರು.