

ಜಗಳೂರು: ಕಲ್ಲೇಶ್ವರಸ್ವಾಮಿ ರಥೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಭಾಗವಹಿಸಲಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಶಾಸಕ ಬಿ. ದೇವೇಂದ್ರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ಕಲ್ಲೇದೇವರಪುರ ಗ್ರಾಮದಲ್ಲಿ ಬುಧವಾರ ಕಲ್ಲೇಶ್ವರಸ್ವಾಮಿ ಜಾತ್ರೆ ಹಿನ್ನೆಲೆ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಗ್ರಾಮದಲ್ಲಿ ಏ.14 ರಿಂದ 20 ರವರೆಗೆ ಎಂಟು ದಿನಗಳ ಕಾಲ ಜಾತ್ರೆ ನಡೆಯಲಿದೆ. ಭಕ್ತಾದಿಗಳಿಗೆ ಕುಡಿಯುವ ನೀರು, ನೆರಳು, ರ್ಪಾಂಗ್, ಆರೋಗ್ಯ ಸೇವೆ ಸೇರಿ ಅಗತ್ಯ ಸೌಲಭ್ಯಗಳನ್ನು ಅಧಿಕಾರಿಗಳು ಮತ್ತು ಗ್ರಾಮಸ್ಥರು ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.
ಗ್ರಾಮದ ಎಲ್ಲ ಚರಂಡಿ ಹಾಗೂ ರಸ್ತೆ ಸ್ವಚ್ಛಗೊಳಿಸಬೇಕು. ಬೀದಿದೀಪ ಹಾಕಬೇಕು, ತೇರು ಬೀದಿಯಲ್ಲಿ ಗುಂಡಿ ಮುಚ್ಚಿಸಬೇಕು. ಜಾತ್ರೆ ಮುಗಿಯುವವರೆಗೂ ನಿತ್ಯ ಮೂರು ಬಾರಿ ರಸ್ತೆಗಳಲ್ಲಿ ನೀರು ಹಾಕಿಸಬೇಕು. ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಆರೋಗ್ಯ ಇಲಾಖೆ ಶಿಬಿರ ಹಮ್ಮಿಕೊಳ್ಳಬೇಕು ಎಂದು ಗ್ರಾಮದ ಬಡಯ್ಯ, ಸಣ್ಣ ಸೂರಯ್ಯ, ತಿಪ್ಪೇಸ್ವಾಮಿ, ಅಜ್ಜಯ್ಯ ಮನವಿ ಮಾಡಿದರು.
ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಮಾತನಾಡಿ, ಜಾತ್ರೆಗೆ ತಾಲೂಕು ಆಡಳಿತದಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಎಲ್ಲ ಅಧಿಕಾರಿಗಳ ಜತೆ ರ್ಚಚಿಸಲಾಗಿದ್ದು ಏನಾದರೂ ಸಮಸ್ಯೆಗಳಿದ್ದರೆ ಕೂಡಲೇ ತಿಳಿಸಿ ಎಂದರು.
ದೇವಸ್ಥಾನ ಸಮಿತಿಯ ಧರ್ವಧ್ಯಕ್ಷ ಕೆ.ಜಿ. ಶರಣಪ್ಪ ಗೌಡ್ರು, ಪ್ರಧಾನ ಅರ್ಚಕ ಡಿ.ಟಿ. ರುದ್ರಮುನಿ, ಪಿಡಬ್ಲ್ಯುಡಿ ಎಇಇ ನಾಗರಾಜ್, ಪಶುಸಹಾಯಕ ನಿರ್ದೇಶಕ ಡಾ. ಲಿಂಗರಾಜ್, ಜಿಪಂ ಎಇಇ ಶಿವಮೂರ್ತಿ, ಅರಣ್ಯಾಧಿಕಾರಿ ಮಹೇಶ್ವರಪ್ಪ, ನಿವೃತ್ತ ಅಧಿಕಾರಿ ಮಹೇಶ್ವರಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಬಡಯ್ಯ ಶಿವಶರಣಯ್ಯ, ಬಿ.ಕೆ. ಕಲ್ಲಪ್ಪ, ಪಿ.ಟಿ. ಸುರೇಶ್, ಚಂದ್ರಪ್ಪ, ಸಣ್ಣ ತಿಪ್ಪಯ್ಯ, ಲೋಕೇಶ್, ಸಣ್ಣ ಸೂರಯ್ಯ, ಅಜ್ಜಯ್ಯ ಸೇರಿ ಮತ್ತಿತರಿದ್ದರು.
ದೇವಸ್ಥಾನಕ್ಕೆ ಸಿಸಿ ಕ್ಯಾಮರಾ ಅಳವಡಿಸಿ: ದೇವಸ್ಥಾನದ ಸುತ್ತಮುತ್ತ ಇರುವ ಮಂಗಗಳು ಭಕ್ತರ ಮೇಲೆ ದಾಳಿ ಮಾಡುತ್ತವೆ. ಅವುಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸಬೇಕು. ಜಾತ್ರೆಗೂ ಮುನ್ನ ದೇವಸ್ಥಾನಕ್ಕೆ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಒಪ್ಪಿಗೆ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ 50 ಹಾದು ಹೋಗಿರುವುದರಿಂದ ಹೆಚ್ಚಿನ ಪೊಲೀಸರನ್ನು ನೇಮಿಸಬೇಕು ಎಂದು ಗ್ರಾಮದ ಮುಖಂಡ ತಿಪ್ಪೇಸ್ವಾಮಿ, ವೀರಸ್ವಾಮಿ ತಿಳಿಸಿದರು. ಇದಕ್ಕೆ ಶಾಸಕ ಬಿ.ದೇವೇಂದ್ರಪ್ಪ ಪ್ರತಿಕ್ರಿಯಿಸಿ, ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.