ಬ.ಬಾಗೇವಾಡಿ ಕ್ಷೇತ್ರಕ್ಕೆ ಎಂ.ಬಿ. ಪಾಟೀಲ ಬಂದರೆ ಗೆಲ್ಲಿಸುವೆ, ಶಾಸಕ ಶಿವಾನಂದ ಪಾಟೀಲ ಅಚ್ಚರಿಯ ಹೇಳಿಕೆ

VJP SHIVANANDA PATIL PRESS MEET
Published on

ವಿಜಯಪುರ: ಬಸವನಬಾಗೇವಾಡಿಗೆ ಯಾರೇ ಬಂದರೂ ಅವರಿಗೆ ಸ್ವಾಗತಿಸುತ್ತೇನೆ. ಅಷ್ಟೇ ಏಕೆ ಎಂ.ಬಿ. ಪಾಟೀಲರೇ ಬಂದರೂ ಅವರನ್ನು ಸ್ವಾಗತಿಸುವುದಷ್ಟೇ ಅಲ್ಲ, ಖುದ್ದಾಗಿ ಬೆಂಬಲಿಸಿ ಗೆಲ್ಲಿಸಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಶಿವಾನಂದ ಪಾಟೀಲ ಮಾರ್ಮಿಕವಾಗಿ ನುಡಿದರು.

ಯಾರು ಯಾವ ಕ್ಷೇತ್ರದಿಂದ ಬೇಕಾದರೂ ಅರ್ಜಿ ಸಲ್ಲಿಸಬಹುದು. ಆದರೆ, ಟಿಕೆಟ್ ವಿಚಾರ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಹೀಗಾಗಿ ಬಬಲೇಶ್ವರ, ಬಸವನಬಾಗೇವಾಡಿ ಹಾಗೂ ವಿಜಯಪುರ ನಗರ ಬಯಸಿದ್ದೇನೆ. ವರಿಷ್ಠರು ಎಲ್ಲಿ ಸಲಹೆ ನೀಡುತ್ತಾರೋ ಅಲ್ಲಿ ನಿಲ್ಲಬೇಕಾಗುತ್ತದೆ. ಎಲ್ಲಿ ಕೊಟ್ಟರೂ ನಿಲ್ಲುವುದಾಗಿ ಹೇಳಿದ್ದೇನೆ. ಇನ್ನು ಯಾರೋ ಒಬ್ಬರು ಬ್ಲಾಕ್ ಮೇಲ್ ಮಾಡುವುದಾಗಿ ಹೇಳಿದ್ದಾರೆ. ಅದು ನನ್ನ ರಾಜಕೀಯದಲ್ಲಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಕ್ಷೇತ್ರ ಹಾಗೂ ಪಕ್ಷ ಬದಲಾವಣೆಗೆ ಸಂಬಂಧಿಸಿದಂತೆ ಉಂಟಾಗಿರುವ ಊಹಾಪೋಹಗಳಿಗೆ ತೆರೆ ಎಳೆದಿರುವ ಶಾಸಕ ಶಿವಾನಂದ ಪಾಟೀಲ, ಯಾವುದೇ ಕ್ಷೇತ್ರದಿಂದ ನಿಲ್ಲಲು ಸ್ವತಂತ್ರ ಹಕ್ಕಿದೆ. ಈ ಬಗ್ಗೆ ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ ಎಂದರು.

ಬಬಲೇಶ್ವರ ಜನರ ಮೇಲೆ ನನ್ನ ಪ್ರೀತಿ ಇದೆ. ಅಲ್ಲಿನ ಜನರ ಪ್ರೀತಿ ಸಹ ನನ್ನ ಮೇಲಿದೆ. ನಾನು ಹೇಳದೇ ಕ್ಷೇತ್ರ ಬಿಟ್ಟು ಹೋಗಿರುವುದು ತಪ್ಪು. ಆ ನೋವು ಇದೆ. ಬಸವನಬಾಗೇವಾಡಿಗೆ ಯಾರೇ ಬಂದರೂ ಅವರಿಗೆ ಸ್ವಾಗತಿಸುತ್ತೇನೆ. ಅಷ್ಟೇ ಏಕೆ ಎಂ.ಬಿ. ಪಾಟೀಲರೇ ಬಂದರೂ ಅವರನ್ನು ಸ್ವಾಗತಿಸುವುದಷ್ಟೇ ಅಲ್ಲ, ಖುದ್ದಾಗಿ ಬೆಂಬಲಿಸಿ ಗೆಲ್ಲಿಸಲು ಪ್ರಯತ್ನಿಸುತ್ತೇನೆ ಎಂದರು.

ಸಂಯುಕ್ತಾ ಪಾಟೀಲ ನಗರ ಕ್ಷೇತ್ರದಿಂದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಶಿವಾನಂದ ಪಾಟೀಲ, ಅರ್ಜಿ ಕೊಡಲು ಬೇಡ ಎಂದಿದ್ದೆ. ಆದರೂ ಅರ್ಜಿ ಸಲ್ಲಿಸಲು ಎಲ್ಲರೂ ಸ್ವತಂತ್ರರೇ ಅಲ್ಲವಾ? ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net