

ಆರ್.ತುಳಸಿಕುಮಾರ್
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅನಧಿಕೃತ ಕಟ್ಟಡಗಳನ್ನು ಕೆಡವಲಾಗುವುದು ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಬೆನ್ನಲ್ಲೇ, ಬಿ ಖಾತಾ ದಾಖಲೆಗಳನ್ನು ಮಾತ್ರ ಹೊಂದಿರುವ ಲಕ್ಷಾಂತರ ಸಂಖ್ಯೆಯ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಸ್ವತ್ತಿನ ಸಚಾತನ ಹೊಂದಿರುವ ಎ ಖಾತಾ ದಾಖಲೆಗಳನ್ನು ಪಡೆಯಲು ದಶಕಗಳಿಂದ ಚಾತಕಪಕ್ಷಿಯಂತೆ ಕಾಯುತ್ತಿರುವ ಸ್ವತ್ತುದಾರರಿಗೆ ತಮ್ಮ ಸೂರು ಎಲ್ಲಿ ಕೈತಪ್ಪಿ ಹೋಗಲಿದೆಯೇ ಎಂಬ ಭಯ ಆವರಿಸಿದೆ. ಸರ್ಕಾರದ ಈ ನಡೆ ನಾಗರಿಕರಲ್ಲಿ ಅಕ್ಷರಶಃ ನಿದ್ದೆಗೆಡಿಸಿದ್ದು, ಕ್ಲಿಷ್ಟ ಹಾಗೂ ಗಂಭೀರ ಸಮಸ್ಯೆಗೆ ಅಧಿಕಾರದಲ್ಲಿರುವವರೇ ಪರಿಹಾರ ಒದಗಿಸಬೇಕೆಂಬ ಒಕ್ಕೊರಳ ಒತ್ತಾಯ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ಕೇಳಿಬಂದಿದೆ.
ಆಧುನಿಕ ಬೆಂಗಳೂರು ನಗರವು ಯೋಜನಾಬದ್ಧವಾಗಿ ನಿರ್ಮಾಣವಾಗಿಲ್ಲ. ಮೂಲಸೌಕರ್ಯ ಕಲ್ಪಿಸುವಲ್ಲಿ ಶಿಸ್ತು ಕಾಪಾಡಿಕೊಳ್ಳದ ಕಾರಣ ನಗರವು ಅಡ್ಡಾದಿಡ್ಡಿಯಾಗಿ ಬೆಳೆವಣಿಗೆಯಾಗಿದೆ. ವಸತಿ ಹಾಗೂ ವಸತಿಯೇತರ ಪ್ರದೇಶಗಳಿಗೆ ಸ್ಪಷ್ಟ ಚೌಕಟ್ಟು ಹಾಕದ ಕಾರಣ ಸಿಕ್ಕ ಸಿಕ್ಕ ಕಡೆಗಳಲ್ಲಿ ಬಡಾವಣೆ ನಿರ್ಮಿಸಲಾಗಿದೆ. ಇಲ್ಲೂ ನಿಯಮ ಪಾಲಿಸದೆ ಅನಧಿಕೃತವಾಗಿ ಮನೆಗಳು ನಿರ್ಮಾಣಗೊಂಡು ಜನರು ವಾಸ್ತವ್ಯ ಹೂಡಿದ್ದಾರೆ. ಈ ತಪ್ಪನ್ನು ಅಂದೇ ಸರಿಪಡಿಸಲು ಆಡಳಿತ ನಡೆಸುವವರು ಕಡಿವಾಣ ಹಾಕದ ಕಾರಣ ಸಮಸ್ಯೆ ಬೃಹತದಾಕಾರವಾಗಿ ಬೆಳೆದುನಿಂತಿದೆ. ಈಗ ಇದೇ ಸಮಸ್ಯೆ ಕುತ್ತಿಗೆಗೆ ಬಂದಿದ್ದು, ಪರಿಹಾರ ಸೂತ್ರ ಹುಡುಕಲು ಸರ್ಕಾರ ತಿಣುಕಾಡುವಂತಾಗಿದೆ. ಕಾಯ್ದೆ, ಕಾನೂನು ಹಾಗೂ ನಿಯಮಾವಳಿಗೆ ತಿದ್ದುಪಡಿ ತರುವ ಪ್ರಯತ್ನವೂ ಸಲತೆ ಕಂಡಿಲ್ಲ. ಇದು ಲಕ್ಷಾಂತರ ಜನರ ಬದುಕಿನ ಪ್ರಶ್ನೆಯಾಗಿದ್ದು, ಗಂಭೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸರ್ಕಾರವೇ ಒಂದು ಚೌಕಟ್ಟು ರೂಪಿಸಿ ಕಾನೂನು ಮೂಲಕವೇ ಪರಿಹಾರ ಕಂಡುಕೊಳ್ಳಬೇಕಿದೆ.
ಸರ್ಕಾರ ಎಡವಿದ್ದೆಲ್ಲಿ?:
2006ರಲ್ಲಿ ಹಿಂದಿನ ಬೆಂಗಳೂರು ಮಹಾನಗರ ಪಾಲಿಕೆಗೆ ಹೊಸ ಪ್ರದೇಶಗಳನ್ನು ಸೇರಿ ಬಿಬಿಎಂಪಿ ರೂಪಿಸಲಾಯಿತು. 2008ರಲ್ಲಿ ಅಧಿಕೃತವಾಗಿ ಬಿಬಿಎಂಪಿ ರಚನೆಗೊಂಡು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು. ಆದರೆ, ಆ ಸಮಯದಲ್ಲಿ ಹೊಸ ಪ್ರದೇಶಗಳಲ್ಲಿ ನಿಯಮಾವಳಿಯಂತೆ ನಿರ್ಮಾಣಗೊಳ್ಳದ ಸ್ವತ್ತುಗಳಿಗೆ ಕಾನೂನು ಚೌಕಟ್ಟಿನಲ್ಲಿ ಪರಿಹಾರ ಸೂತ್ರ ರೂಪಿಸಿ ಅಧಿಕೃತಗೊಳಿಸುವ ಕೆಲಸ ಆಗಲಿಲ್ಲ. ಆನಂತರವೂ ಅಧಿಕಾರಕ್ಕೇರಿದ ಸರ್ಕಾರಗಳು ಪರಿಹಾರ ಕಂಡುಕೊಳ್ಳಲಿಲ್ಲ. ಬದಲಾಗಿ ಮೂಲಸೌಕರ್ಯ ಕಲ್ಪಿಸಿ ಆ ಸ್ವತ್ತುದಾರರಿಂದ ತೆರಿಗೆ ಕಟ್ಟಿಸಿಕೊಂಡು ಸುಮ್ಮನಾದರು. ಇಂತಹ ಸ್ವತ್ತುಗಳು ಬಿ ಖಾತಾ ನಾಂಮಾಂಕಿತ ಪಡೆಯಿತು. ತಪ್ಪುಗಳನ್ನು ಸಕ್ರಮ ಮಾಡಲು ಸರ್ಕಾರ ಒಂದಿಷ್ಟು ಕಸರತ್ತು ನಡೆಸಿದರೂ, ಕಾನೂನು ವ್ಯಾಪ್ತಿಯಲ್ಲಿ ಅನುಮೋದನೆ ಸಿಗದ ಕಾರಣ ಎ ಖಾತೆ ದಾಖಲೆಪತ್ರ ಸಿಗುವುದು ಮರಿಚಿಕೆಯಾಗಿದೆ.
ಸಿಐಡಿ ತನಿಖೆಯಾದರೂ ಸಲ್ಲಿಕೆಯಾಗದ ವರದಿ:
2015-16ರಲ್ಲಿ ಪಾಲಿಕೆಯ ವಿವಿಧ ವಲಯಗಳಲ್ಲಿ ಬಿ ಖಾತಾ ಸ್ವತ್ತುಗಳಿಗೆ ಅನಧಿಕೃತವಾಗಿ ಎ ಖಾತಾ ನೀಡಿ ಅಕ್ರಮ ಪ್ರಕರಣ ಬಯಲಾಯಿತು. ಅಂದಾಜು 2.5 ಲಕ್ಷ ಸ್ವತ್ತುಗಳಿಗೆ ಅಕ್ರಮವಾಗಿ ಖಾತಾ ಮಾಡಿಕೊಟ್ಟಿದ್ದನ್ನು ದೃಢಪಡಿಸಿಕೊಳ್ಳಲು ಸಿಐಡಿ ತನಿಖಗೆ ವಹಿಸಲಾಯಿತು. ನಿಜಾಂಶ ತಿಳಿಯಲು ಅಧಿಕಾರಿಗಳ ತಂಡ ರಚಿಸಿತ್ತಾದರೂ, ಈವರೆಗೂ ವರದಿಯನ್ನೇ ನೀಡಿಲ್ಲ. ಹೈಕೋರ್ಟ್‌ನಲ್ಲೂ ಪ್ರಕರಣ ದಾಖಲುಗೊಂಡು ಎ ಖಾತಾ ದಾಖಲೆ ನೀಡಲು ಆಕ್ಷೇಪ ವ್ಯಕ್ತವಾಯಿತು. ಈ ಕಾರಣದಿಂದ ಸರ್ಕಾರ ಕಾನೂನು ಸಮರ ಮುಂದುವರಿಸಲು ನಿಧಾನ ಮಾಡಿದ್ದು, ಇನ್ನೂ ಪರಿಹರಿಸಿಕೊಳ್ಳಲು ಸಾಧ್ಯವಾಗಿಲ್ಲ.
ಕೆಡುವುದು ಸುಲಭವೇ?
2023ರಲ್ಲಿ ಬಿಬಿಎಂಪಿಯ ಆಗಿನ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಮಾಹಿತಿ ಸಂಗ್ರಹಿಸಿ ಎಲ್ಲ ಎಂಟೂ ವಲಯಗಳಲ್ಲಿ ಎ ಖಾತಾ ನೀಡಲು 45,133 ಪ್ರಕರಣಗಳಲ್ಲಿ ಆರ್ ಕೋಡ್ 130 ಬಳಸಿಕೊಂಡು 898.70 ಕೋಟಿ ರೂ. ಹಣ ಪಾವತಿಸಿಕೊಂಡಿರುವುದನ್ನು ಮರುಪರಿಶೀಲಿಸಲು ವರದಿ ನೀಡಿದ್ದರು. ಆದರೆ, 2.5 ಲಕ್ಷಕ್ಕೂ ಹೆಚ್ಚಿನ ಸ್ವತ್ತುಗಳಲ್ಲಿ ಪ್ರಮಾದ ಆಗಿರುವುದಾಗಿ ಮಾಹಿತಿ ಸಂಗ್ರಹಿಸಲಾಗಿತ್ತು. ಇದರ ಹೊರತಾಗಿಯೂ ನಗರದಲ್ಲಿ 22 ಲಕ್ಷ ಸ್ವತ್ತುಗಳ ಪೈಕಿ ಅರ್ಧಕ್ಕೂ ಹೆಚ್ಚಿನವುಗಳಿಗೆ ಎ ಖಾತಾ ಇಲ್ಲ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ. ಅಂದರೆ, ನಿಯಮ ಉಲ್ಲಂಸಿರುವ ಇಷ್ಟೂ ಸ್ವತ್ತುಗಳನ್ನು ಕಾನೂನು ಪರಿಧಿಯಲ್ಲಿ ನೋಡುವುದಾದರೆ ನೆಲಕ್ಕುರುಳಿಸುವ ಕೆಲಸ ಕಾರ್ಯಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ.
ಸರ್ಕಾರದ ಮುಂದಿರುವ ಸವಾಲು ಏನು?:
* ಬಿ ಖಾತಾ ಸ್ವತ್ತುಗಳಿಗೆ ಎ ಖಾತಾ ನೀಡಲು ಕಾನೂನು ಅಡಿಯಲ್ಲಿ ಸಾಧ್ಯವೆ.
* ಹಾಲಿ ನಿಯಮಾವಳಿ, ಕಾಯ್ದೆಯಲ್ಲಿ ಸಕ್ರಮಕ್ಕೆ ಅವಕಾಶ ಇಲ್ಲದಿರುವಾಗ ಹೊಸ ಕಾಯ್ದೆ ಸಾಧುವೆ.
* ಎ ಖಾತಾ ಪ್ರಮಾಣಪತ್ರ ನೀಡಿದರೆ ಮಾಡಿದ ತಪ್ಪನ್ನು ಒಪ್ಪಿಕೊಂಡಂತಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆ.
* ಪಾಲಿಕೆಯಲ್ಲಿ ಚುನಾಯಿತ ಸರ್ಕಾರ ಅಸ್ತಿತ್ವದಲ್ಲಿ ಇಲ್ಲದ ಕಾರಣ ಬೇರೆ ಕಾಯ್ದೆ ಅನ್ವಯ ಪರಿಹಾರ ರೂಪಿಸಲು ತಾಂತ್ರಿಕ ಅಡ್ಡಿ.
* ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳ ಹೊರತಾಗಿ ಹೊಸ ಕಾಯ್ದೆಗೆ ಕಾನೂನು ಬಲ ಸಿಗುವುದೆ.
ಕಾನೂನಿನಲ್ಲಿ ಬಿ ಖಾತಾ ಸ್ವತ್ತುಗಳಿಗೆ ಮಾನ್ಯತೆ ಇಲ್ಲ. ಹಾಗಂತ ಎ ಖಾತಾ ದಾಖಲಾತಿ ನೀಡಲು ಸರ್ಕಾರವೇ ಸ್ಪಷ್ಟ ನಿಲುವು ಕೈಗೊಂಡು ಪರಿಹಾರ ಕೈಗೊಳ್ಳಬೇಕು. ನಗರ ತಜ್ಞರು, ಕಾನೂನು ಪರಿಣಿತರು ಪ್ರಮಾಣಿಕ ಪ್ರಯತ್ನ ಮಾಡಿ ಮಾಹಿತಿ ನೀಡಬೇಕು. ಇದನ್ನು ಸರ್ಕಾರ ಎಲ್ಲ ವಿಧದಿಂದಲೂ ಪರಾಮರ್ಶೆ ನಡೆಸಿ ಕಾನೂನು ಚೌಕಟ್ಟಿನಲ್ಲಿ ಕಾಯ್ದೆ ರೂಪಿಸಿ ಜನರಿಗೆ ಒಳಿತು ಮಾಡುವ ಕೆಲಸ ಮಾಡುವ ಸವಾಲನ್ನು ಸ್ವೀಕರಿಸಲಿ.
- ಪಿ.ಆರ್.ರಮೇಶ್, ಮಾಜಿ ಮೇಯರ್
ಮಹಾನಗರದಲ್ಲಿ ಬಿ ಖಾತಾ ಹೊಂದಿರುವ ಸ್ವತ್ತುಗಳ ಸಂಖ್ಯೆಯೇ ಹೆಚ್ಚಿವೆ. ಕಾನೂನು ವ್ಯಾಪ್ತಿಯಲ್ಲಿ ಪರಿಹಾರ ಕಂಡುಕೊಳ್ಳದ ಕಾರಣ ನಾಗರಿಕರು ಹಾಗೂ ಅಧಿಕಾರಿಗಳು ವಾಮಮಾರ್ಗ ಅನುಸರಿಸಿ ಎ ಖಾತಾ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ತಡೆ ಹಾಕಿ ಸಕ್ರಮ ಮಾಡಿಕೊಳ್ಳುವಂತಹ ಪರಿಹಾರ ಸೂತ್ರವನ್ನು ಸರ್ಕಾರ ರೂಪಿಸುವುದು ಒಳಿತು. ಇದರಿಂದ ಸರ್ಕಾರಕ್ಕೆ ದೊಡ್ಡ ಮೊತ್ತದ ಆದಾಯವೂ ಬರಲಿದೆ.
- ಎನ್.ಆರ್.ರಮೇಶ್, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ
ಬೆಂಗಳೂರಿನಲ್ಲಿ ಸ್ವಂತ ಸೂರು ಹೊಂದುವ ಆಸೆಯಿಂದ ಬಿ ಖಾತಾ ಸೈಟ್ ಖರೀದಿಸಿ ಮನೆಯನ್ನೂ ನಿರ್ಮಿಸಿದ್ದೇನೆ. 10 ವರ್ಷಗಳಾದರೂ ಇನ್ನೂ ಎ ಖಾತಾ ಪಡೆಯಲು ಸಾಧ್ಯವಾಗಿಲ್ಲ. ಬೆಟರ್‌ಮೆಂಟ್ ಶುಲ್ಕ ಪಾವತಿಸಲು ಸಿದ್ಧನಿದ್ದು, ನನ್ನ ಸ್ವತ್ತಿಗೆ ಪಕ್ಕಾ ದಾಖಲೆಗಳನ್ನು ಹೊಂದಲು ಸರ್ಕಾರವೇ ದಾರಿ ತೋರಿಸಲಿ.
- ಹರೀಶ್, ನಾಗರಿಕ