

ಕೆ.ಆರ್.ನಗರ: ರಾಜ್ಯ ಸರ್ಕಾರ ಬಿ ಖಾತೆ ನೀಡಲು ಆದೇಶಿಸಿದ್ದು, ಇದರಿಂದ ನಮ್ಮ ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಜ್ಯದ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಪುರಸಭೆ ವ್ಯಾಪ್ತಿಯ ಕಂದಾಯ ಮತ್ತು ಅನಧಿಕೃತ ಬಡಾವಣೆಗಳಲ್ಲಿರುವ ನಿವೇಶನ ಮತ್ತು ಕಟ್ಟಡಗಳಿಗೆ ಬಿ ಖಾತೆ ನೀಡುವಂತೆ ಅಧಿವೇಶನದಲ್ಲಿ ಒತ್ತಾಯಿಸುವುದರ ಜತೆಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೆ ಎಂದು ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ.18 ರಿಂದ ಮೇ 10ರವರೆಗೆ ಬಿ ಖಾತೆ ಮಾಡಿಸಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದ್ದು, ಇದಕ್ಕೆ ಕಾರಣರಾದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ನಗರಾಭಿವೃದ್ಧ್ದಿ ಸಚಿವರು ಮತ್ತು ಪೌರಾಡಳಿತ ಸಚಿವರಿಗೆ ಕ್ಷೇತ್ರದ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನಮ್ಮ ಸರ್ಕಾರದ ಈ ಐತಿಹಾಸಿಕ ನಿರ್ಧಾರದಿಂದ ರಾಜ್ಯದ ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದ ಜನತೆಯ ಬಹುವರ್ಷಗಳ ಬೇಡಿಕೆ ಈಡೇರಿದ್ದು, ಇಂತಹ ಉತ್ತಮ ನಿರ್ಧಾರಗಳಿಂದ ಜನರ ಸೇವೆ ಮಾಡಲು ನಮಗೆ ಇನ್ನಷ್ಟು ಉತ್ಸಾಹ ಸಿಗಲಿದೆ. ಚುನಾವಣಾ ಪೂರ್ವದಲ್ಲಿ ನಾನು ಪ್ರಚಾರಕ್ಕೆ ಹೋದಾಗ ನನ್ನನ್ನು ಆಯ್ಕೆ ಮಾಡಿದರೆ, ಬಿ ಖಾತೆ ಮಾಡಿಸುವ ಆದೇಶ ಹೊರಡಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಭರವಸೆ ನೀಡಿದ್ದೆ ಎಂದರು.
ಮುಂದಿನ ದಿನಗಳಲ್ಲಿ ಪಟ್ಟಣದ ಪುರಸಭೆಯ 23 ವಾರ್ಡ್‌ಗಳ ಸದಸ್ಯರು ಹಾಗೂ ಅಧಿಕಾರಿಗಳ ಜತೆಯಲ್ಲಿ ಎಲ್ಲ ವಾರ್ಡ್‌ಗಳಲ್ಲಿಯೂ ಬಿ ಖಾತಾ ಅಭಿಯಾನ ನಡೆಸಲಾಗುವುದು. ಇದರಿಂದ ಸುಮಾರು 3 ಸಾವಿರ ಫಲಾನುಭವಿಗಳು ಅನುಕೂಲ ಪಡೆಯಲಿದ್ದು, ಸರ್ಕಾರ ನಿಗದಿಪಡಿಸಿರುವ ಗಡುವಿನೊಳಗೆ ಎಲ್ಲರೂ ಬಿ ಖಾತೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅನಧಿಕೃತ ಬಡಾವಣೆಗಳು, ಕಂದಾಯ ಭೂಮಿಗಳಲ್ಲಿ ನಿವೇಶನ ಮತ್ತು ಕಟ್ಟಡಗಳಿಗೆ ಬಿ ಖಾತೆ ನೀಡಲು ಆಸ್ತಿಗೆ ಸಂಬಂಧಿಸಿದ ಮಾಲೀಕತ್ವದ ಪತ್ರ, ಋಣಭಾರ ಪ್ರಮಾಣ ಪತ್ರ, ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ಪಾವತಿ ರಸೀದಿ, ಮಾಲೀಕರು ಮತ್ತು ಸ್ವತ್ತಿನ ಛಾಯಾಚಿತ್ರ, ಮಾಲೀಕರ ಗುರುತಿನ ಪ್ರತಿ ಸೇರಿದಂತೆ ಇತರ ದಾಖಲೆಗಳನ್ನು ಸಲ್ಲಿಸಿ 3 ತಿಂಗಳೊಳಗೆ ಒಂದು ಬಾರಿಗೆ ಇ-ಆಸ್ತಿ ತಂತ್ರಾಂಶದಲ್ಲಿ ನಮೂನೆ-3ಎ ರ ಬಿ ಖಾತಾವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಪುರಸಭೆ ಅಧ್ಯಕ್ಷ ಶಿವುನಾಯಕ್ ಮಾತನಾಡಿ, ಪುರಸಭೆ ಅಭಿವೃದ್ಧಿಗೆ ಶಾಸಕರು ಸರ್ಕಾರದಿಂದ ಹೆಚ್ಚು ಅನುದಾನ ಕೊಡಿಸಿಕೊಡಬೇಕೆಂದು ಮನವಿ ಮಾಡಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಪುರಸಭೆ ಉಪಾಧ್ಯಕ್ಷೆ ವಸಂತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಮಿಕ್ಸರ್ ಶಂಕರ್, ಸದಸ್ಯರಾದ ಕೋಳಿಪ್ರಕಾಶ್, ಕೆ.ಜಿ.ಸುಬ್ರಮಣ್ಯ, ಸೈಯದ್ ಸಿದ್ದಿಕ್, ಕೆ.ಪಿ.ಪ್ರಭುಶಂಕರ್, ಕೆ.ಎಲ್.ಜಗದೀಶ್, ನಟರಾಜು, ಜಾವಿದ್ ಪಾಷಾ, ಶಂಕರ್‌ಸ್ವಾಮಿ, ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಮುಖಂಡರಾದ ಚಿಕ್ಕವೀರು, ವೃಷಬೇಂದ್ರ, ಆದರ್ಶ, ಧರ್ಮರಾಜು ಇತರರಿದ್ದರು.