

ಕುಶಾಲನಗರ: ಅಂಗವಿಕಲರಿಗೆ ಸರ್ಕಾರದ ಸೌಲಭ್ಯ ತಲುಪಲು ಹೆಚ್ಚಿನ ಪ್ರಚಾರದ ಅಗತ್ಯ ಇದೆ ಎಂದು ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಹೇಳಿದರು.
ಕೊಡಗು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಹಾಗೂ ಕುಶಾಲನಗರದ ಶ್ರೀ ಕಾವೇರಿ ಪೋಷಕರ ಸ್ವ-ಸಹಾಯ ಸಂಘದ ಸಹಯೋಗದಲ್ಲಿ ಶನಿವಾರ ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಆರಂಭಿಸಿರುವ ಸಮುದಾಯ ಪುನರ್ವಸತಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಅಂಗವಿಕಲ ಮಕ್ಕಳ ಬಗ್ಗೆ ಪಾಲಕರು ಎಂದಿಗೂ ತಾತ್ಸಾರ ಮನೋಭಾವ ತಾಳಬಾರದು. ಹಲವು ಕಾರಣಗಳಿಂದ ದಿವ್ಯಾಂಗರಾಗಿ ಹುಟ್ಟುವ ಮಕ್ಕಳ ಪಾಲನೆ ಕಷ್ಟಸಾಧ್ಯವಾದರೂ ಕೂಡ ಅವರ ಬಗ್ಗೆ ಹೆಚ್ಚಿನ ಕಾಳಜಿ ಹೊಂದುವುದು ಅಗತ್ಯವಿದೆ. ಅಂಗವಿಕಲರಲ್ಲಿ ಹಲವರು ಸರ್ಕಾರದ ಮೂಲಕ ದೊರೆಯುವ ಸೌಲಭ್ಯಗಳನ್ನು ಪಡೆಯಲು ಇನ್ನೂ ಮುಂದಾಗಿಲ್ಲ. ಇಂತಹವರನ್ನು ಗುರುತಿಸಿ ಅಗತ್ಯ ಸಹಕಾರ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿ. ಸಮುದಾಯ ಪುನರ್ವಸತಿ ಕೇಂದ್ರದಲ್ಲಿ ದೊರೆಯುವ ಆರೈಕೆಗಳ ಮೂಲಕ ಇಂಥವರಿಗೆ ಒಂದಷ್ಟು ಶಕ್ತಿ ತುಂಬುವ ಕೆಲಸವಾಗಲಿದೆ ಎಂದರಲ್ಲದೆ, ಸರ್ಕಾರದಿಂದ ದೊರೆಯುವ ಆರ್ಥಿಕ ನೆರವಿನ ಮಟ್ಟ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಉಪಾಧ್ಯಕ್ಷ ಡಾ.ಕೆ.ಎಸ್. ಚಂದ್ರಶೇಖರ್ ಮಾತನಾಡಿ, ಅಂಗವಿಕರಿಗಾಗಿ ಸರ್ಕಾರದಿಂದ ರೂಪಿಸಿರುವ ವಿವಿಧ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಎಂ.ಸತೀಶ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ವತಿಯಿಂದ ಫಲಾನುಭವಿಗಳಿಗೆ ನೀಡಿದ ವ್ಹೀಲ್‌ಚೇರ್‌ಗಳನ್ನು ಶಾಸಕರು ಹಸ್ತಾಂತರಿಸಿದರು. ಶ್ರೀ ಕಾವೇರಿ ಪೋಷಕರ ಸಂಘದ ಪ್ರತಿನಿಧಿ ದಿವ್ಯಾ ಮುಖೇಶ್ ಅವರನ್ನು ಸನ್ಮಾನಿಸಲಾಯಿತು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ರಂಗಧಾಮಪ್ಪ, ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಟರಾಜು, ಕುಶಾಲನಗರ ರೋಟರಿ ಮುಖ್ಯಸ್ಥ ಎಂ.ಡಿ.ರಂಗಸ್ವಾಮಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಕೆ.ಜಿ.ವಿಮಲಾ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಆರೋಗ್ಯ ವಿಭಾಗ ಮುಖ್ಯಸ್ಥ ಡಾ.ಜಿ.ಎಸ್.ಕುಮಾರ್, ವೈವಿಧ್ಯತೆ ಮತ್ತು ಸೇರ್ಪಡೆ ವಿಭಾಗದ ನಿರ್ದೇಶಕಿ ಎಸ್.ಆರ್.ದೀಪಶ್ರೀ, ಕಾರ್ಯಕ್ರಮ ವ್ಯವಸ್ಥಾಪಕ ಅಂಕಾಚಾರಿ, ಬೆಂಗಳೂರಿನ ನ್ಯೂ ಸ್ಪೇಸ್ ಇಂಡಿಯಾದ ಮಾನವ ಸಂಪನ್ಮೂಲ ಹಾಗೂ ಆಡಳಿತ ವಿಭಾಗದ ಮುಖ್ಯ ವ್ಯವಸ್ಥಾಪಕಿ ಡಾ.ದೀಪಾಲಿ ಪ್ರಧಾನ್ ಇದ್ದರು.