

ಧಾರವಾಡ: ಅಂಗವಿಕಲರನ್ನು ಕಂಡರೆ ಸಮಾಜ ನೋಡುವ ದೃಷ್ಟಿಯೇ ಬೇರೆ. ಅವರನ್ನು ತಮ್ಮವರೆಂದು ಅಪ್ಪಿಕೊಳ್ಳುವ ಹೃದಯಗಳೇ ವಿರಳ. ಆದರೆ ಯುವಕನೋರ್ವ ಅಂಗವಿಕಲ ಯುವತಿಗೆ ಬಾಳು ನೀಡಿ, ಆಕೆಯ ಬಾಳಿಗೆ ಬೆಳಕಾದ ಪ್ರಸಂಗ ಬುಧವಾರ ನಗರದಲ್ಲಿ ನಡೆದಿದೆ.
ಇಲ್ಲಿನ ಅಕ್ಕನ ಬಳಗ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಯೇ ಈ ಅಪರೂಪದ ಕ್ಷಣಕ್ಕೆ ಸಾಕ್ಷಿ. ಮದುವೆ ಸಂದರ್ಭದಲ್ಲಿ ವರ ಅಥವಾ ವಧುವಿನಲ್ಲಿ ಇರುವ ಅಂಗವಿಕಲತೆ ಮುಚ್ಚಿಟ್ಟು ಮದುವೆ ಮಾಡಿ, ಬಳಿಕ ವಿಚ್ಛೇದನ ಪಡೆದ ಅನೇಕ ಪ್ರಸಂಗಗಳಿವೆ. ಆದರೆ ಇಲ್ಲಿ ವಧು ಅಂಗವಿಕಲೆ ಎಂದು ವರನಿಗೆ ಗೊತ್ತಿದ್ದರೂ ಮದುವೆಯಾಗಿದ್ದು ವಿಶೇಷ.
ಇಂತಹ ವಿಶೇಷ ಸಂಗತಿಗೆ ಕಮಲಾಪುರದ ವಿನಾಯಕ ಶಿಂಧೆ ಹಾಗೂ ಸೈದಾಪುರದ ಮೀನಾಕ್ಷಿ ಕ್ಷೀರಸಾಗರ ಎಂಬವವರೇ ಸಾಕ್ಷಿಯಾಗಿದ್ದಾರೆ. ಮೀನಾಕ್ಷಿ ಹುಟ್ಟಿನಿಂದಲೂ ಅಂಗವಿಕಲೆ. ಆದಾಗ್ಯೂ ಅವರನ್ನು ವಿನಾಯಕ ಮದುವೆಯಾಗಿ ಬದುಕಿಗೆ ಆಸರೆಯಾಗಿದ್ದಾನೆ.
ಅಂಗವಿಕಲೆಯನ್ನೇ ಮದುವೆ ಆಗಬೇಕು ಎಂದು ವಿನಾಯಕ ಮೊದಲಿನಿಂದಲೇ ಸಂಕಲ್ಪ ಮಾಡಿದ್ದರು. ಅದೇ ರೀತಿ ಮಿನಾಕ್ಷಿಯನ್ನು, ತನ್ನ ಪೋಷಕರ ಸಮ್ಮುಖದಲ್ಲೇ ನೋಡಿದ್ದರು. ಎಲ್ಲರೂ ಒಪ್ಪಿಗೆ ಸೂಚಿಸಿದ್ದರಿಂದ ಅಕ್ಕನಬಳಗ ಕಲ್ಯಾಣ ಮಂಟಪದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿ ಮದುವೆ ನಡೆಸಲಾಯಿತು.
ಇಂತಹವರಿಗೆ ಇವರೇ ಜೋಡಿ ಎಂದು ದೇವರು ಮೊದಲೇ ನಿಶ್ಚಯಿಸಿರುತ್ತಾನೆ ಎಂದು ಕೇಳಿದ್ದೇವೆ. ಆದರೆ, ಇಲ್ಲಿ ನಡೆದ ಮದುವೆ ಗಮನಿಸಿದರೆ ಆ ಮಾತು ನೂರಕ್ಕೆ ನೂರು ಸತ್ಯ ಎನಿಸುತ್ತದೆ. ಅಂಗವಿಕಲರನ್ನು ಕಂಡರೆ ಅಸಹ್ಯ ಪಡದೆ, ಅವರನ್ನೂ ಪ್ರೀತಿಸಿ ಪ್ರೋತ್ಸಾಹಿಸುವ ಕೆಲಸವಾಗಲಿ ಎನ್ನುವುದಕ್ಕೆ ವಿನಾಯಕ ನಾಂದಿ ಹಾಡಿದ್ದಾರೆ.
ನಮ್ಮ ಮದುವೆಯೂ ಸಾಮಾನ್ಯ ರೀತಿಯಲ್ಲೇ ನಡೆದಿದೆ. ಮೀನಾಕ್ಷಿ ಅವರಲ್ಲಿನ ಅಂಗವೈಕಲ್ಯ ನನಗೆ ಸಮಸ್ಯೆ ಎನಿಸಿಲ್ಲ. ಅವರನ್ನು ಮದುವೆಯಾಗುವುದಾಗಿ ತಂದೆ-ತಾಯಿಗೆ ತಿಳಿಸಿದೆ. ಅವರೂ ಸಮ್ಮತಿ ನೀಡಿದ್ದಾರೆ. ಅವರನ್ನು ಮದುವೆಯಾಗಿದ್ದು ಖುಷಿಯಾಗಿದೆ.| ವಿನಾಯಕ ಶಿಂಧೆ, ವರ