ಜನರ ದಾಹ ನೀಗಿಸುತ್ತಿರುವ ವ್ಯಾಪಾರಿಗಳು

0504Aland1
ಆಳಂದ ಬಸ್ ನಿಲ್ದಾಣ ಎದುರು ವ್ಯಾಪಾರಿಗಳು ಸಾರ್ವಜನಿಕರಿಗಾಗಿ ಕುಡಿವ ನೀರಿನ ವ್ಯವಸ್ಥೆ ಮಾಡಿರುವುದು.
Published on

ಶಿವಲಿಂಗ ಎಸ್.ತೇಲ್ಕರ್ ಆಳಂದ: ಬಿಸಿಲಿನ ಆರ್ಭಟ ಜೋರಾಗಿದ್ದು, ಅತ್ಯಧಿಕ ಉಷ್ಣಾಂಶದಿಂದ ಸಾರ್ವಜನಿಕರು ಪರದಾಡುತ್ತಿದ್ದಾರೆ. ವಿವಿಧ ಕೆಲಸ ಕಾರ್ಯಕ್ಕಾಗಿ ಹೊರಗಡೆ ತಿರುಗಾಡುವ ಜನರ ಅನುಕೂಲಕ್ಕಾಗಿ ಸಣ್ಣ-ಪುಟ್ಟ ವ್ಯಾಪಾರಿಗಳು ಸೇರಿ ಆಳಂದನಲ್ಲಿ ನೀರ ಸೇವೆ ಆರಂಭಿಸಿದ್ದಾರೆ.

ಪಟ್ಟಣದ ಬಸ್ ನಿಲ್ದಾಣದ ಎದುರಿನ ಪ್ರದೇಶದಲ್ಲಿ ಕಟ್ಟಿಗೆಯ ಟೇಬಲ್‌ವೊಂದರ ಮೇಲೆ ತಂಪಾದ ನೀರಿನ ಕ್ಯಾನ್ ಇರಿಸಿದ್ದು, ನಿತ್ಯ ತಿರುಗಾಡುವ ಜನರು ತಣ್ಣನೆಯ ನೀರನ್ನು ಕುಡಿದು ತಮ್ಮ ದಾಹ ತೀರಿಸಿಕೊಳ್ಳುತ್ತಿದ್ದಾರೆ. ನೀರ ಸೇವೆಯನ್ನು ಸುತ್ತಮುತ್ತಲಿನ ಕರ್ಮಚಾರಿಗಳು, ಎಳೆನೀರು ಮಾರಾಟಗಾರರು, ಹೂ ಮಾರುವವರು ಸೇರಿ ಸಣ್ಣಪುಟ್ಟ ವ್ಯಾಪಾರಸ್ಥರು ನಿರ್ವಹಣೆ ಮಾಡುತ್ತಿದ್ದಾರೆ.

ನಿತ್ಯ ಸುಮಾರು ೨೫-೩೦ ಕೋಲ್ಡ್ ಕ್ಯಾನ್‌ಗಳು ಬೇಕಾಗುತ್ತಿದ್ದು, ಅದಕ್ಕಾಗಿ ದಿನಕ್ಕೆ ೧೫೦೦ ರೂ. ಖರ್ಚು ಮಾಡುತ್ತಿದ್ದಾರೆ. ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು, ಕೆಕೆಆರ್‌ಟಿಸಿ ಸಿಬ್ಬಂದಿ ಹಾಗೂ ವಿವಿಧ ಕೆಲಸ ಕಾರ್ಯಕ್ಕಾಗಿ ತಿರುಗಾಡುವವರಿಗೆ ಸಾಕಷ್ಟು ಅನುಕೂಲವಾಗಿದೆ. ಮೇ ತಿಂಗಳು ಮುಗಿಯುವವರೆಗೂ ನೀರ ಸೇವೆ ಮುಂದುವರಿಯಲಿದೆ ಎನ್ನುತ್ತಾರೆ ವ್ಯಾಪಾರಸ್ಥರು.

ತಾಲೂಕು ಆಡಳಿತ, ಪುರಸಭೆ ಹಾಗೂ ಬಸ್ ನಿಲ್ದಾಣದಿಂದ ಶುದ್ಧ ಹಾಗೂ ತಂಪು ನೀರಿನ ವ್ಯವಸ್ಥೆ ಮಾಡುವ ಕಾರ್ಯವಾಗಬೇಕಿತ್ತು. ಆದರೆ ಇವರೆಲ್ಲರೂ ತಮಗೇನು ಸಂಬಂಧವಿಲ್ಲ ಎಂಬಂತೆ ವರ್ತಿಸಿದ್ದರಿಂದ ವ್ಯಾಪಾರಿಗಳೇ ಜನರ ದಾಹ ತೀರಿಸಲು ಮುಂದಾಗಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕಳೆದೊಂದು ವಾರದಿಂದ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗಾಗಿ ಪಟ್ಟಣದಲ್ಲಿ ತಂಪಾದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದಾರೆ. ೩-೪ ದಿನದ ಹಿಂದೆಯೇ ಪುರಸಭೆ ಅಧಿಕಾರಿಗಳಿಗೆ ನೀರಿನ ಕುಂಡ ಅಳವಡಿಸಲು ಸೂಚನೆ ನೀಡಿದ್ದೇನೆ. | ಪ್ರಕಾಶ ಹೊಸಮನಿ, ತಹಸೀಲ್ದಾರ್

ನಾವೆಲ್ಲರೂ ಸಣ್ಣ-ಪುಟ್ಟ ವ್ಯಾಪಾರಿಗಳು, ನಮ್ಮೊಂದಿಗೆ ವಹಿವಾಟು ನಡೆಸುವ ಮೂಲಕ ಜನರು ನಮ್ಮ ಹೊಟ್ಟೆ ತುಂಬಿಸುತ್ತಿದ್ದಾರೆ. ಸಾರ್ವಜನಿಕರ ಸೇವೆ ಮಾಡುವ ಸಮಯ ಬಂದಿದ್ದು, ಬಂದ ಆದಾಯದಲ್ಲಿಯೇ ಒಂದಿಷ್ಟು ಹಣ ಖರ್ಚು ಮಾಡಿ ಜನರ ನೀರಿನ ದಾಹ ತೀರಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನಮಗೆ ತೃಪ್ತಿಯಿದೆ.
| ಆಲಿಂ ಜಮಾದಾರ, ತಂಪು ಪಾನೀಯ ಮಾರಾಟಗಾರ, ಆಳಂದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net