

ಚಿಕ್ಕಬಳ್ಳಾಪುರ: ಸಾಕಷ್ಟು ಜನರು ಜೀವನ ನಿರ್ವಹಣೆಗಾಗಿ ಅಕ್ಷರದಿಂದ ದೂರವಾಗಿ ದುಡಿಮೆಯಲ್ಲಿ ನಿರತರಾಗಿದ್ದಾರೆ, ಅಂತಹವರನ್ನು ಗುರುತಿಸಿ ಅಕ್ಷರ ಜ್ಞಾನವನ್ನು ಬೆಳೆಸಬೇಕು, ಆ ಮೂಲಕ ಅವರಿಗೊಂದು ಸ್ವಾವಲಂಬಿ ಬದುಕು ರೂಪಿಸಬೇಕು ಎಂದು ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಸಲಹೆ ನೀಡಿದರು.
ನಗರಸಭೆ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಜಿಲ್ಲಾ ಲೋಕ ಶಿಕ್ಷಣ ಸಮಿತಿ ಬುಧವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೀವನದಲ್ಲಿ ಕದಿಯಲಾಗದ ನಿಜವಾದ ಆಸ್ತಿ ಶಿಕ್ಷಣ. ಕಷ್ಟಪಟ್ಟು ಸಾಕಿ ಸಲುಹುವ ಪಾಲಕರು ಮಕ್ಕಳನ್ನು ಚೆನ್ನಾಗಿ ಓದಿಸಬೇಕು. ಸ್ವಾವಂಬಲನೆಯಿಂದ ಸಂಪತ್ತನ್ನು ಸಂಪಾದಿಸುವ ಶಕ್ತಿಯನ್ನು ಬೆಳೆಸಬೇಕು ಎಂದರು.
ಊರಿನ ಸ್ವಚ್ಛತೆ ನಿರ್ವಹಣೆಗಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರು ಸಾಕ್ಷರ ಕಾರ್ಯಕ್ರಮಗಳನ್ನು ಸದ್ವಿನಿಯೋಗಪಡಿಸಿಕೊಂಡು ಯಾರೋ ಹೇಳಿದ ಕಡೆ ಹೆಬ್ಬೆಟ್ಟು ಒತ್ತುವ ಸಂಪ್ರದಾಯಕ್ಕೆ ತಿಲಾಂಜಿ ಹಾಡಬೇಕು, ದಿನಪತ್ರಿಕೆ ಓದುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಾಕ್ಷರತಾ ಕಾರ್ಯಕ್ರಮಗಳನ್ನು ವಿಶೇಷ ಆದ್ಯತೆಯ ಮೇರೆಗೆ ನಗರ, ಪಟ್ಟಣ ಪ್ರದೇಶದ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಕೈಗೊಳ್ಳಲಾಗುತ್ತಿದೆ. ಸಾಕಷ್ಟು ಮಂದಿ ಕಾರಣಾಂತರಗಳಿಂದ ಔಪಚಾರಿಕ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರಿಗೆ ಅನೌಪಚಾರಿಕ ಶಿಕ್ಷಣ ತರಬೇತಿ ಸಹಕಾರಿಯಾಗಲಿದೆ ಎಂದು ನಗರಾಭಿವೃದ್ಧಿ ಯೋಜನಾ ಇಲಾಖೆ ಮುಖ್ಯ ಯೋಜನಾಧಿಕಾರಿ ಧನುರೇಣುಕಾ ಅಭಿಪ್ರಾಯಪಟ್ಟರು.
ಶಿಕ್ಷಣವನ್ನು ಪಡೆಯುವಲ್ಲಿ ಯಾವುದೇ ವಯಸ್ಸಿನ, ಲಿಂಗದ ತಾರತಮ್ಯ ಇರಬಾರದು. ಲೋಕಜ್ಞಾನಕ್ಕಾಗಿ ಅವಶ್ಯಕವಿರುವಷ್ಟು ಓದು, ಬರೆಯುವುದನ್ನು ಪ್ರತಿಯೊಬ್ಬರು ಕಲಿಯಲೇಬೇಕು ಎಂದರು.
ನಗರಸಭೆಯ 86 ಅನಕ್ಷರಸ್ಥ ಮತ್ತು ಅರೆ ಅಕ್ಷರಸ್ಥ ಪೌರಕಾರ್ಮಿಕರಿಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ನಾಜೀಮಾ ಖಾತೂನ್, ನಗರಸಭೆ ಪೌರಾಯುಕ್ತ ಡಾ.ಎನ್.ಮಹಂತೇಶ್, ಕಾರ್ಯಕ್ರಮ ಸಹಾಯಕರಾದ ಟಿ.ವಿ.ರಾಜಣ್ಣ, ತಾಲೂಕು ಸಂಯೋಜಕರಾದ ನಾರಾಯಣಸ್ವಾಮಿ ಮತ್ತಿತರರು ಇದ್ದರು.