

ತುಮಕೂರು: ಆಜಾದಿ ಕಾ ಅಮೃತ ಮಹೋತ್ಸವ ಭಾರತದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಸಂಕೇತ ವಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಹೇಳಿದರು.
ನಗರದ ಗಾಜಿನ ಮನೆಯಲ್ಲಿ ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ ವತಿಯಿಂದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರ ಜಾಗೃತಿ ಅಭಿಯಾನ ಸಮಾರೋಪದಲ್ಲಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಅನೇಕ ಮಹನೀಯರ ತ್ಯಾಗ, ಬಲಿದಾನದಿಂದ ಬಂದಿದೆ. ನಾವೆಲ್ಲರೂ ಸ್ವಾತಂತ್ರ್ಯ ತಂದುಕೊಟ್ಚ ಮಹನೀಯರನ್ನು ಸದಾ ಸ್ಮರಿಸಬೇಕು ಎಂದರು.
ದೇಶದ ಪ್ರತಿಯೊಬ್ಬರೂ ಭಾರತದ ಸಂವಿಧಾನದ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ದೇಶಸೇವೆಯಲ್ಲಿ ತೊಡಗಬೇಕು. ಹೀಗಾದಾಗ 75ನೇ ಸ್ವಾತಂತ್ರ್ಯ ಅಮೃತ ಮಹೋ ತ್ಸವ ಸಾರ್ಥಕ ಎನಿಸಿಕೊಳ್ಳಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಆತ್ಮನಿರ್ಭರ ಭಾರತ ಆಶಯ ಪ್ರತಿಯೊಬ್ಬರಿಗೂ ಒಳಿತು ಬಯಸುವುದೇ ಆಗಿದೆ. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭವನ್ನು ಕಣ್ತುಂಬಿಕೊಳ್ಳವ ಕ್ಷಣದಲ್ಲಿ ನಾವೆಲ್ಲರೂ ಇದ್ದೇವೆ. ಪ್ರತಿಯೊಬ್ಬರೂ ಹರ್ ಘರ್ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡು ಈ ಅಭಿಯಾನ ಯಶಸ್ವಿಗೊಳಿಸಿ ದೇಶಪ್ರೇಮ ಮೆರೆಯಬೇಕು ಎಂದರು.
ದೇಶದ ಪ್ರತಿಯೊಬ್ಬ ಜನರ ಆಶೋತ್ತರ ಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯೋನ್ಮುಖವಾಗಿವೆ. ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಒಟ್ಟುಗೂಡಿ ಶ್ರಮಿಸಬೇಕು, ಆಗ ಮಾತ್ರ ಸ್ವಚ್ಛ ಪರಿಸರ ಹೊಂದಲು ಸಾಧ್ಯ ಎಂದರು.
ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಹೊರ ತಂದಿರುವ ಸ್ಮರಣಿಕೆ ಹಾಗೂ ಅಮೃತ್ ಭಾರತ್ ವೆಬ್‌ಸೈಟ್ ಅನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಬಿಡುಗಡೆಗೊಳಿಸಿದರು.
ಇಡೀ ರಾಷ್ಟ್ರ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಮೂರು ದಿನ ನಡೆಯುವ ಹರ್ ಘರ್ ತಿರಂಗಾ ಯಾತ್ರೆ ಅಭಿಯಾನ ಯಶಸ್ವಿಯಾಗಲಿ ಎಂದು ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹಾರೈಸಿದರು.
ವಿವಿಧ ಸ್ಪರ್ಧೆ ವಿಜೇತರಾದ ತಂಡಗಳಿಗೆ ಪ್ರಶಂಸನಾ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಕ್ಯಾಪ್ಟನ್ ನವೀನ್ ನಾಗಪ್ಪ, ಸಂಸ್ಥೆಯ ಗೌರವಾಧ್ಯಕ್ಷ
ಎಸ್.ಪಿ.ಚಿದಾನಂದ್, ಅಧ್ಯಕ್ಷ ಜಿ.ಎಸ್.ಬಸವರಾಜು ಮತ್ತಿತರರು ಇದ್ದರು.
ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ: 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು ಕರೆಯಲಾಗುತ್ತಿದೆ ಹಾಗಾಗಿ, ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಕರೆಕೊಟ್ಟರು.
ನಾವೆಲ್ಲರೂ ಮೂಲಭೂತ ಹಕ್ಕು, ಕರ್ತವ್ಯಗಳನ್ನು ಮರೆತಿದ್ದೇವೆ, ಮೂಲಭೂತ ಕರ್ತವ್ಯಗಳನ್ನು ಪಾಲನೆ ಮಾಡಿದಾಗ ದೇಶದ ಏಳ್ಗೆ ಸಾಧ್ಯ. ವಿದ್ಯಾರ್ಥಿಗಳು ಪ್ರಾಮಾಣಿಕತೆ, ಆತ್ಮವಿಶ್ವಾಸ ಹೊಂದಿದ್ದರೆ ಜಗತ್ತಿನಲ್ಲಿ ಎಷ್ಟು ಎತ್ತರದ ಸ್ಥಾನಕ್ಕೆ ಬೇಕಾದರೂ ಹೋಗಬಹುದು. ಅಪ್ರಾಮಾಣಿಕತೆ ಮನುಷ್ಯನನ್ನು ಉತ್ತುಂಗಕ್ಕೆ ಕೊಂಡೊಯ್ಯುವುದಿಲ್ಲ ಎನ್ನುವುದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಷ್ಟ್ರ, ನಾಡು, ಗಡಿ, ನುಡಿ, ನೀರಿನ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ಮೂಡಿಸಬೇಕು. ಅವರನ್ನು ರಾಷ್ಟ್ರಪ್ರೇಮಿಗಳನ್ನಾಗಿ ರೂಪಿಸಬೇಕು ಎಂದ ಅವರು, ನಾವು ಯಾವುದೇ ಕೆಲಸ ಮಾಡುತ್ತಿದ್ದರೂ ಅದರಲ್ಲಿ ನಿಷ್ಠೆ ಇರಬೇಕು. ಆಗ ಮಾತ್ರ ರಾಷ್ಟ್ರಸೇವೆ, ರಾಷ್ಟ್ರಭಕ್ತಿಗೆ ಬೆಲೆ ಬರುತ್ತದೆ ಎಂದರು.
150 ಅಡಿ ಧ್ವಜ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗಿ
ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ ಹಮ್ಮಿಕೊಂಡಿದ್ದ ‘ದೇಶಕ್ಕಾಗಿ ನಅಡಿಗೆ’ ರಾಷ್ಟ್ರ ಜಾಗೃತಿ ಅಭಿಯಾನದಲ್ಲಿ ತ್ರಿವರ್ಣಧ್ವಜ ಹಿಡಿದು ಸಾವಿರಾರು ಜನ ಭಾಗಿಯಾದರು. ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶನಿವಾರ ಬೆಳಗ್ಗೆ ಆರಂಭವಾದ ವಾಕಥಾನ್‌ಗೆ ಕಿರುತೆರೆ ನಟಿ ಚಂದನಾ ಅನಂತಕೃಷ್ಣ ಚಾಲನೆ ನೀಡಿದರು. ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡು ಸರ್ಕಾರಿ ಕಿರಿಯ ಕಾಲೇಜು, ಬಿಜಿಎಸ್ ವೃತ್ತ, ಅಶೋಕ ರಸ್ತೆ, ಸ್ವತಂತ್ರ ಚೌಕ ಮಾರ್ಗವಾಗಿ ಗಾಜಿನ ಮನೆವರೆಗೆ ದೇಶಕ್ಕಾಗಿ ನಡಿಗೆ ಜಾಥಾ ನಡೆಸಿದರು. 150 ಅಡಿ ರಾಷ್ಟ್ರಧ್ವಜ ಮೆರವಣಿಗೆ ಮೆರುಗು ಹೆಚ್ಚಿಸಿತ್ತು. ದಾರಿಯುದ್ದಕ್ಕೂ ಸ್ವಾತಂತ್ರೃ ಹೋರಾಟಗಾರರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು. ದೇಶಪ್ರೇಮದ ಘೋಷಣೆಗಳೂ ಮೊಳಗಿದವು. ನಗರದ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸೇರಿ ಸಾವಿರಾರು ಜನರು ಭಾಗವಹಿಸಿದ್ದರು. ಬಹುತೇಕರು ರಾಷ್ಟ್ರಬಾವುಟ ಕೈಯಲ್ಲಿ ಹಿಡಿದು ಹೆಜ್ಜೆ ಹಾಕಿದ್ದು ನೋಡುಗರಿಗೆ ಮೈರೋಮಾಂಚನಗೊಳಿಸಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರ 75ನೇ ಅಮೃತ ಮಹೋತ್ಸವ ವರ್ಷಾಚರಣೆ ಮಾಡುತ್ತಿದ್ದೇವೆ. ಇಂದಿನಿಂದ ಆ.15ರ ವರೆಗೆ ಹರ್ ಘರ್ ತಿರಂಗಾ ಅಭಿಯಾನ ನಡೆಸುತ್ತಿದ್ದೇವೆ. ಜಿಲ್ಲೆಯಲ್ಲಿ 4.5 ಲಕ್ಷ ಮನೆಗಳ ಮೇಲೆ ಧ್ವಜಾರೋಹಣ ಮಾಡುತ್ತಿರುವುದು ಹೆಮ್ಮೆಯ ವಿಷಯ.
_ ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ
ದೇಶದ 75ನೇ ವರ್ಷದ ಆಜಾದಿ ಕಾ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ರಾಷ್ಟ್ರ ಜಾಗೃತಿ ಅಭಿಮಾನ ಮಾಡುತ್ತಿರುವುದು ದೇಶದಲ್ಲಿ 75 ವರ್ಷದ ಹಿಂದೆ ಇದ್ದಂತಹ ಸ್ವಾತಂತ್ರ್ಯದ ಕಿಚ್ಚಿನ ವಾತಾವರಣ ಮತ್ತೊಮ್ಮೆ ನಮ್ಮೆಲ್ಲರ ನಡುವೆ ನಿರ್ಮಾಣವಾಗಿದೆ.
ಜಿ.ಬಿ.ಜ್ಯೋತಿಗಣೇಶ್ ಶಾಸಕ