ವಸತಿ ಯೋಜನೆ ಅನುದಾನಕ್ಕೂ ಜಿಎಸ್ ಟಿ, ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಟೀಕೆ

IMG-20240901-WA0015.jpg
Published on

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ ಕೇವಲ ಬಾಯಿ ಮಾತಿನಲ್ಲಿ ಉಳಿದಿದೆ. ಬಡವರು ಕಟ್ಟಿಕೊಳ್ಳುವ ಮನೆಗಳಿಗೆ ಕೇಂದ್ರ ಸರ್ಕಾರ ನೀಡುವ ಅನುದಾನವನ್ನು ಜಿಎಸ್ಟಿ ಹೆಸರಿನಲ್ಲಿ ವಾಪಸ್ ಕಿತ್ತುಕೊಳ್ಳಲಾಗುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ವಸತಿ, ವಕ್ಫ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಜೆಡ್. ಜಮೀರ್ ಅಹ್ಮದ ಖಾನ್ ಮನವಿ ಮಾಡಿದರು.

ಇಲ್ಲಿಯ ಹಳೇಹುಬ್ಬಳ್ಳಿ ಸದಾಶಿವನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ನಿಮಿರ್ಸಲಾದ ಸರ್ಕಾರಿ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಪದವಿ ಪೂರ್ವ ಕಾಲೇಜು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. 60 ವರ್ಷದಿಂದ ಜಾರಿಯಲ್ಲಿದ್ದ ಶಿಷ್ಯವೇತನವನ್ನು ಬಿಜೆಪಿ ಬಂದ್ ಮಾಡಿತ್ತು. ಇದೀಗ ಮತ್ತೆ ಸಿಎಂ ಸಿದ್ದರಾಮಯ್ಯ ಅವರು ಆರಂಭಿಸಿ, 89 ಕೋಟಿ ರೂ. ಮೀಸಲಿಟ್ಟಿದ್ದಾರೆ ಎಂದರು.

ಬಿಜೆಪಿಯವರು ಹಿಂದು ಮುಸ್ಲಿಂ ಭೇದಭಾವ ಮಾಡುತ್ತ ಅಭಿವೃದ್ಧಿಯನ್ನು ಕಡೆಗಣಿಸುತ್ತ ಬಂದಿದ್ದಾರೆ ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಜಾತಿ, ಧರ್ಮದವರು ಏಳ್ಗೆಗೆ ಶ್ರಮಿಸುತ್ತಿದೆ. 2024ರಲ್ಲಿ ವಿದೇಶದಲ್ಲಿ ವ್ಯಾಸಂಗ ಮಾಡುವ 1300 ವಿದ್ಯಾರ್ಥಿಗಳಿಗೆ ತಲಾ 5 ಲಕ್ಷ ರೂ. ನೀಡಲಾಗುತ್ತಿದೆ. ಹಜ್ ಹೌಸ್ ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕೇಂದ್ರ ಆರಂಭಿಸಲಾಗಿದೆ ಎಂದು ಹೇಳಿದರು.

ಪೂರ್ವ ಕ್ಷೇತ್ರದ ಅಭಿವೃದ್ಧಿಗಾಗಿ ಇಲಾಖೆ ವತಿಯಿಂದ ಮುಂದಿನ ದಿನಗಳಲ್ಲಿ 25 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಕರ್ನಾಟಕ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಮಾತನಾಡಿ, ಮೌಲಾನಾ ಆಜಾದ್ ಪದವಿ ಪೂರ್ವ ಕಾಲೇಜು ಉದ್ಘಾಟನೆ ಮೂಲಕ ಬಹು ದಿನಗಳ ಕನಸು ನನಸಾಗಿದೆ. ಶಿಕ್ಷಣಕ್ಕೆ ಒತ್ತು ನೀಡಿದಾಗ ಮಾತ್ರ ಸಮಾಜ ಬೆಳವಣಿಗೆ ಹೊಂದಲಿದೆ. ರಾಜ್ಯದಲ್ಲಿ 100 ಮೌಲಾನಾ ಆಜಾದ್ ಶಾಲೆ, 100 ವಸತಿ ನಿಲಯ, ಹೊಸ ಪದವಿ ಪೂರ್ವ ಕಾಲೇಜು ಆರಂಭಕ್ಕೆ ಮುಂದಾಗಿರುವುದು ಸಂತಸದ ಸಂಗತಿ ಎಂದರು.

ಕ್ಷೇತ್ರದ ಅಭಿವೃದ್ಧಿಗೆ ಸಚಿವ ಜಮೀರ್ ಅಹ್ಮದ ಅವರು 50 ಕೋಟಿ ರೂ. ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಗೋಪಾಲ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಹಿಂದೆ ಜಿಲ್ಲೆಯಲ್ಲಿ 4 ಮೊರಾರ್ಜಿ ದೇಸಾಯಿ ವಸತಿ ನಿಲಯಗಳಿದ್ದವು. ಹೊಸದಾಗಿ 6 ವಸತಿ ನಿಲಯಗಳು ಮಂಜೂರಾಗಿವೆ. ಮೊದಲು 2500 ವಿದ್ಯಾಥಿರ್ಗಳಿಗೆ ಪ್ರವೇಶ ಕಲ್ಪಿಸಲಾಗುತ್ತಿತ್ತು. ಪ್ರಸ್ತುತ 5 ಸಾವಿರ ವಿದ್ಯಾಥಿರ್ಗಳಿಗೆ ಪ್ರವೇಶ ಕಲ್ಪಿಸಲು ಅನುಕೂಲವಾಗಲಿದೆ ಎಂದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಾಕೀರ್ ಸನದಿ, ಮಾಜಿ ಸಂಸದ ಐ.ಜಿ. ಸನದಿ, ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕ ಜಿಲಾನಿ ಮೊಖಾಶಿ, ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.
ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಸ್ವಾಗತಿಸಿದರು.

ಕಾಲೇಜು ಕಟ್ಟಡ: ಅಲ್ಪಸಂಖ್ಯಾತರ ಮೌಲಾನಾ ಆಜಾದ ಕಾಲೇಜು ಕಟ್ಟಡವನ್ನು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಅಂದಾಜು 124.38 ಲಕ್ಷ ವೆಚ್ಚದಲ್ಲಿ ನಿಮಿರ್ಸಲಾಗಿದೆ. 6 ಬೋಧನಾ ಕೊಠಡಿ, ಕಾರ್ಯಾಲಯ ಹಾಗೂ ವಿದ್ಯಾರ್ಥಿ ಮತ್ತು ವಿದ್ಯಾರ್ಥಿಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ಕಟ್ಟಡ ಒಳಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net