

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ರೆವೆನ್ಯೂ ಕಾಲನಿಯ ಶ್ರೀ ಧರ್ಮಶಾಸ್ತ ಸೇವಾ ಸಮಿತಿ ವತಿಯಿಂದ ರಮೇಶ ಪಾತ್ರೋಟ ಗುರುಸ್ವಾಮಿ ನೇತೃತ್ವದಲ್ಲಿ ಶ್ರೀ ಅಯ್ಯಪ್ಪನ ಪೂಜೆ ಹಾಗೂ ಮೆರವಣಿಗೆ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ಬೆಳಗ್ಗೆ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಅಭಿಷೇಕ, ಭಜನೆ, ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ, ಬಳಿಕ ಉಡುಪಿಯ ಶ್ರೀಧರ ಭಟ್ ಅವರಿಂದ ಚಂಡಿಕಾ ಹೋಮ, ಅಭಿಷೇಕ, ಕುಂಭಮೇಳ ಭಜನೆ ಜರುಗಿದವು.
ಮಧ್ಯಾಹ್ನ 3ಕ್ಕೆ ರಮೇಶ ಪಾತ್ರೋಟ ಗುರುಸ್ವಾಮಿಜಿ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಮೆರವಣಿಗೆಗೆ ಸಿದ್ಧಾರೂಢ ಮಠದ ಶ್ರೀ ಶಿವಪುತ್ರ ಸ್ವಾಮೀಜಿ, ತೆಂಕಲಗೂಡ ಮಠದ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಚಾಲನೆ ನೀಡಲಾಯಿತು. ವಿಜಯಾನಂದ ಶೆಟ್ಟಿ, ಮಹೇಶ ಶೆಟ್ಟಿ ಪಡಿ ಪೂಜೆ ನೆರವೇರಿಸಿದರು. ಪಾಲಿಕೆ ಸದಸ್ಯ ಮಂಜು ಬಟ್ಟಣ್ಣವರ ಕಳಶ ಪೂಜೆ ನೆರವೇರಿಸಿದರು. ಪಾಲಿಕೆ ಸದಸ್ಯ ಶಿವು ಹಿರೇಮಠ ಹಾಗೂ ರವಿ ಜಾಧವ ಕುಂಭ ಪೂಜೆ ನೆರವೇರಿಸಿದರು.
ಬಳಿಕ ರೆವೆನ್ಯೂ ಕಾಲನಿಯಿಂದ ಆರಂಭವಾದ ಅಯ್ಯಪ್ಪ ಸ್ವಾಮಿಯ ಭವ್ಯ ಮೆರವಣಿಗೆಯು ಶ್ರೀಸಾಯಿ ಮಂದಿರ ರಸ್ತೆ, ದಾಸನಕೊಪ್ಪ ವೃತ್ತ, ಸಪ್ತಾಪುರ, ಜಯನಗರ, ಶ್ರೀನಗರ, ಶಕ್ತಿ ಕಾಲನಿ ಮಾರ್ಗವಾಗಿ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಮರಳಿ ದೇವಸ್ಥಾನ ತಲುಪಿತು.
ಮೆರವಣಿಗೆಯಲ್ಲಿ ಚಂಡೆ, ಮದ್ದಳೆ ಸೇರಿ ವಿವಿಧ ಕಲಾ ಪ್ರಕಾರಗಳು ಗಮನ ಸೆಳೆದವು. ಮೆರವಣಿಗೆ ವೀಕ್ಷಣೆಗೆ ವಿವಿಧ ಜಿಲ್ಲೆಗಳ ಸಾವಿರಾರು ಜನರು ಆಗಮಿಸಿದ್ದರು. ಉತ್ಸವ ಸಮಿತಿ ಅಧ್ಯಕ್ಷ ಉದಯ ಶೆಟ್ಟಿ ಉಪಸ್ಥಿತರಿದ್ದರು.