

ಲಿಂಗಸುಗೂರು: ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನದ 8ನೇ ವಾರ್ಷಿಕೋತ್ಸವ ಹಾಗೂ ಮಹಾಮಂಡಲ ಪೂಜೆ ಪ್ರಯುಕ್ತ ಮಾಲಾಧಾರಿಗಳು ಅಯ್ಯಪ್ಪಸ್ವಾಮಿ ಭಾವಚಿತ್ರ ಮೆರವಣಿಗೆಯನ್ನು ಶ್ರದ್ಧಾ ಭಕ್ತಿಯಿಂದ ಸೋಮವಾರ ನಡೆಸಿದರು.
ಪಟ್ಟಣದ ಈಶ್ವರ ದೇವಸ್ಥಾನದಿಂದ ಗಡಿಯಾರ ವೃತ್ತ, ಅಂಚೆ ಕಚೇರಿ, ಬಸ್ ನಿಲ್ದಾಣ ವೃತ್ತದಿಂದ ಅಯ್ಯಪ್ಪಸ್ವಾಮಿ ದೇವಸ್ಥಾನದವರೆಗೆ ಉತ್ಸವ ಮೂರ್ತಿ ಹಾಗೂ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಬೆಳಗ್ಗೆ ಸುಪ್ರಭಾತಂ, ನೈರ್ಮಲ್ಯ ದರ್ಶನಂ, ಕೇರಳದ ತಂತ್ರಿ ರತ್ನಾ ವೇದ ವಿಭೂಷಣ ಪ್ರಶಾಂತ ನಂಬೋದರಿ ಅವರಿಂದ ಮಹಾ ಗಣಪತಿ ಹೋಮ ಹಾಗೂ ದೇವತೆಗಳಿಗೆ ಕಳಸಾಭಿಷೇಕ ಕಾರ್ಯಕ್ರಮಗಳು ಜರುಗಿದವು.
ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ದೀಪಾರಾಧನೆ ಮತ್ತು ದೀಪೋತ್ಸವ, ಭಗವತಿ ಸೇವಾ, ಅಯ್ಯಪ್ಪಸ್ವಾಮಿ 18 ಮೆಟ್ಟಿಲು ಪಡಿಪೂಜೆ, ಹತ್ತಾಯ ಪೂಜೆ, ಪುಷ್ಪಾಭಿಷೇಕ, ಪಾನಕ ನೈವೇದ್ಯ, ಹರಿವರಾಸನಂ ಸೇರಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮನೋಹರರಡ್ಡಿ ಮುನ್ನೂರು, ಉಪಾಧ್ಯಕ್ಷ ಬಸವರಾಜಗೌಡ ಗಣೇಕಲ್, ಪ್ರಮುಖರಾದ ಶ್ರೀನಿವಾಸರಡ್ಡಿ, ಬಸವರಾಜಪ್ಪ ಮುನ್ನೂರು, ಗುರುಸ್ವಾಮಿಗಳಾದ ಈರಣ್ಣ, ಸಿದ್ರಾಮಪ್ಪ ನಗರಗುಂಡ, ಮಂಜುನಾಥ, ಮಾರೆಪ್ಪ ನಾಯಕ, ಮಂಜುನಾಥ ಕುಪ್ಪಿಗುಡ್ಡ, ರಾಜೇಶ ಮಾಣಿಕ್ ಇತರರಿದ್ದರು.