ಧಾರ್ಮಿಕ ಕಾರ್ಯಗಳಿಂದ ಜೀವನ ಸಾರ್ಥಕ

ayyappa temple
Published on

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಧಾರ್ಮಿಕ ಕಾರ್ಯಗಳ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು, ದೇವರ ಮೊರೆ ಹೋಗುವ ಮೂಲಕ ಜೀವನದಲ್ಲಿ ನೆಮ್ಮದಿ ಕಾಣುವ ಪ್ರಯತ್ನ ಮಾಡಬೇಕು ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ನಗರದ ಎಂವಿ ಬಡಾವಣೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 26 ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ದೇವರ ಕಾರ್ಯ, ಧಾರ್ಮಿಕ ವಿಧಿ ವಿಧಾನಗಳಿಗೆ ನಮ್ಮ ನಾಡಿನಲ್ಲಿ ವಿಶೇಷ ಸ್ಥಾನಮಾನವಿದೆ. ಪ್ರತಿ ದೇವರ ಕಾರ್ಯಕ್ಕೂ ತನ್ನದೇ ಆದ ವಿಶೇಷತೆಗಳಿರುತ್ತವೆ, ಜನರು ಶ್ರದ್ಧಾಭಕ್ತಿಯಿಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಸನ್ಮಾರ್ಗ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು. ದೇಗುಲಗಳು ನಮ್ಮ ನಾಡಿನ ಸಂಸ್ಕೃತಿ, ಪರಂಪರೆಯ ಪ್ರತೀಕವಾಗಿದೆ, ಇಂಥ ವಿಶೇಷ ಸಂದರ್ಭಗಳಲ್ಲಿ ಎಲ್ಲರೂ ಪಾಲ್ಗೊಂಡು ಸಂಭ್ರಮಪಡಬೇಕು ಸಹಬಾಳ್ವೆ ಪ್ರದರ್ಶಿಸಬೇಕೆಂಬ ಸದುದ್ದೇಶದಿಂದ ಹಿರಿಯರು ಇಂಥ ಕಾರ್ಯಕ್ರಮಗಳಲ್ಲಿ ವೇದಿಕೆ ರೂಪಿಸಿದ್ದಾರೆ. ಆದ್ದರಿಂದ ಹಿರಿಯರು ಕಿರಿಯರು ಎಲ್ಲರೂ ಪಾಲ್ಗೊಂಡು ದೇವರ ಆರಾಧನೆ ಮಾಡಬೇಕು ಎಂದರು.
ಭಕ್ತರಿಗೆ ಪ್ರಸಾದ ವಿನಿಯೋಗ:

ಅಯ್ಯಪ್ಪಸ್ವಾಮಿ ದೇಗುಲದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿತ್ತು. ಎಂಟಿಬಿ ನಾಗರಾಜ್ ಭಕ್ತರಿಗೆ ಪ್ರಸಾದ ಹಂಚುವ ಮೂಲಕ ಎಲ್ಲರಿಗೂ ಶುಭಕೋರಿದರು. ಇದೇ ವೇಳೆ ದೇವಾಲಯದ ಆಡಳಿತ ಮಂಡಳಿಯಿಂದ ಮಾಜಿ ಸಚಿವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net