

ಹೊಳೆನರಸೀಪುರ: ಪಟ್ಟಣದ ರಿವರ್ ಬ್ಯಾಂಕ್ ರಸ್ತೆಯ ಲಕ್ಷ್ಮಣೇಶ್ವರ ದೇವಸ್ಥಾನದ ಹಿಂಭಾಗದಲ್ಲಿನ ಹೇಮಾವತಿ ನದಿ ದಂಡೆಯ ಮೇಲೆ ಧರ್ಮಶಾಶ್ತ ಅಯ್ಯಪ್ಪಸ್ವಾಮಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಅಯ್ಯಪ್ಪಸ್ವಾಮಿ ದೇವಾಲಯ ಮಾ.12ರಂದು ಉದ್ಘಾಟನೆಯಾಗಲಿದೆ.
ಅಯ್ಯಪ್ಪಸ್ವಾಮಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕಕ್ಕೆ ಸಕಲ ಸಿದ್ಧತೆ ಭರದಿಂದ ಸಾಗಿದೆ. ವಾಸವಿ ಪೀಠದ ಗುರುಗಳಾದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಕುಂಭಾಭಿಷೇಕ ನೆರವೇರಿಸಲಿದ್ದು, ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ವಾಸುದೇವನ್ ನಂಬೂದರಿ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆಯಲಿದೆ. ಬೆಂಗಳೂರಿನ ಅಯ್ಯಪ್ಪ ಭಕ್ತ ನಟರಾಜ್ ಅವರ ಮಾರ್ಗದರ್ಶನದಲ್ಲಿ ಶಿಲ್ಪಿ ಸ್ವಾಮಿನಾಥನ್ ದೇವಾಲಯ ನಿರ್ಮಾಣ ಮಾಡಿದ್ದಾರೆ.
ಮಾ.10 ರಿಂದ 17 ರವರೆಗೆ ಧಾರ್ಮಿಕ ಕಾರ್ಯ ನಡೆಯಲಿದೆ. 12 ರಂದು ಗಣಪತಿ ಹೋಮ, ಪ್ರಾಣ ಪ್ರತಿಷ್ಠೆ, ತತ್ವ ಕಲಶ ಪೂಜೆ, ಅಭಿಷೇಕ, ಅನುಜ್ಞಾ ಕಲಶ ಪೂಜೆ, ಕುಂಭಾಭಿಷೇಕ, ಅಯ್ಯಪ್ಪನ ಪ್ರತಿಷ್ಠಾಪನೆ ನಡೆಯಲಿದೆ. ಮಧ್ಯಾಹ್ನ 12ರಿಂದ ಅನ್ನಸಂತರ್ಪಣೆ ನಡೆಯಲಿದೆ. 14 ರಂದು ನೂತನ ದೇವಾಲಯದ 18 ಮೆಟ್ಟಿಲುಗಳ ಪಡಿಪೂಜೆ ನೆರವೇರಲಿದ್ದು, 16 ರಂದು ಸಂಜೆ 5ರಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಯ್ಯಪ್ಪಸ್ವಾಮಿ ಉತ್ಸವ ನಡೆಯಲಿದೆ.
ಈಗಾಗಲೇ ಪಟ್ಟಣವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತಿದ್ದು, ದೇವಾಲಯವನ್ನು ಹಲವು ಬಗೆಯ ಹೂವುಗಳಿಂದ ಸಿಂಗರಿಸಲಾಗುತ್ತಿದೆ. ಅಯ್ಯಪ್ಪನ ಭಕ್ತರು ದೇವಾಲಯ ಸಮಿತಿ ಸದಸ್ಯರು ತಾಲೂಕಿನ ಪ್ರತಿ ಹಳ್ಳಿಗೆ ತೆರಳಿ ಜನರನ್ನು ಆಹ್ವಾನಿಸುತ್ತಿದ್ದಾರೆ. ದೇವಾಲಯ ನಿರ್ಮಾಣಕ್ಕೆ ಶಾಸಕ ಎಚ್.ಡಿ.ರೇವಣ್ಣ ಹೆಚ್ಚಿನ ಸಹಕಾರ ನೀಡಿದ್ದು, ತಾಲೂಕಿನ ಅಯ್ಯಪ್ಪ ಭಕ್ತರು, ಸಾರ್ವಜನಿಕರೂ ಸಹಕರಿಸಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಟಿ.ಶಿವಕುಮಾರ್ ತಿಳಿಸಿದ್ದಾರೆ.