ಗಮನ ಸೆಳೆದ ಅಯ್ಯಪ್ಪಸ್ವಾಮಿ ಮೆರವಣಿಗೆ

22 vikram 11
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ರೆವೆನ್ಯೂ ಕಾಲನಿಯ ಶ್ರೀ ಧರ್ಮಶಾಸ್ತ್ರ ಸೇವಾ ಸಮಿತಿ ವತಿಯಿಂದ ರಮೇಶ ಪಾತ್ರೋಟ ಗುರುಸ್ವಾಮಿ ನೇತೃತ್ವದಲ್ಲಿ ಶ್ರೀ ಅಯ್ಯಪ್ಪನ ಪೂಜೆ ಹಾಗೂ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.

ಭಕ್ತರ ಇಷ್ಟಾರ್ಥ ಸಿದ್ಧಿ ಹಾಗೂ ಲೋಕ ಕಲ್ಯಾಣಾರ್ಥ ಬೆಳಗ್ಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ಅಭಿಷೇಕ, ಭಜನೆ, ವಿಶೇಷ ಪೂಜೆ, ನವಗ್ರಹ ಹೋಮ, ಗಣಹೋಮ, ಕುಂಭಮೇಳ, ಭಜನೆ ಜರುಗಿದವು.

ಸಂಜೆ ರಮೇಶ ಪಾತ್ರೋಟ ಗುರುಸ್ವಾಮಿ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಅಂಬಾರಿ ಮೆರವಣಿಗೆಗೆ ಮುಕ್ತಿಮಠದ ಶ್ರೀ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಿದ್ದಾರೂಢಮಠದ ಶ್ರೀ ಮಾದವಾನಂದ ಸ್ವಾಮೀಜಿ, ಶ್ರೀ ಶಿವಪುತ್ರ ಸ್ವಾಮೀಜಿ ಚಾಲನೆ ನೀಡಿದರು. ರೆವೆನ್ಯೂ ಕಾಲನಿಯಿಂದ ಅರಂಭವಾದ ಮೆರವಣಿಗೆಯು ಸಾಯಿ ಮಂದಿರ, ಸಪ್ತಾಪುರಭಾವಿ, ಜಯನಗರ, ಶ್ರೀನಗರ, ಶಕ್ತಿ ಕಾಲನಿ ಮಾರ್ಗವಾಗಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಶ್ರೀ ಶಿರಡಿ ಸಾಯಿ ಬಾಬಾ ಮಂದಿರಕ್ಕೆ ಆಗಮಿಸಿ ಸಂಪನ್ನಗೊಂಡಿತು.

ಮೆರವಣಿಗೆಯಲ್ಲಿ ಚಂಡೆ, ಮದ್ದಳೆ, ಜಾಂಜ್​, ಕಲಾ ಮೇಳ ಸೇರಿ ವಿವಿಧ ಕಲಾ ಪ್ರಕಾರಗಳು ಗಮನ ಸೆಳೆದವು. ಮೆರವಣಿಗೆ ವೀಕ್ಷಣೆಗೆ ವಿವಿಧ ಜಿಲ್ಲೆಗಳ ಸಾವಿರಾರು ಜನರು ಆಗಮಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ, ಎಸಿಪಿ ಪ್ರಶಾಂತ್​ ಸಿದ್ದನಗೌಡರ, ಶ್ರೀ ಸಾಯಿ ಮಂದಿರ ಅಧ್ಯಕ್ಷ ಮಹೇಶ ಶೆಟ್ಟಿ , ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ, ಮಂಜು ಬಟ್ಟೆಣ್ಣವರ, ಶಿವಾಜಿ ಪಡಕೆ ಉದಯ ಶೆಟ್ಟಿ, ಗಿರೀಶ ಮಂಗೋಣಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net