

ಹುಬ್ಬಳ್ಳಿ: ಇಲ್ಲಿಯ ಶಿರೂರ ಪಾರ್ಕ್ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಮಣ ನಿಮಿತ್ತ ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿ ಭಾವದಿಂದ ನಡೆದವು.
ಬೆಳಗ್ಗೆ ಅಭಿಷೇಕ ಮುಂತಾದ ಸೇವೆಗಳು ನಡೆದವು. ಸಂಜೆ ಪಡಿಪೂಜೆ ಹಾಗೂ ದೇವಸ್ಥಾನ ಆವರಣದಲ್ಲಿ ಜ್ಯೋತಿ ದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬೃಹತ್ ಪರದೆಯ ಮೇಲೆ ಶಬರಿಮಲೆಯಲ್ಲಿ ಜ್ಯೋತಿ ರೂಪದಲ್ಲಿ ದರ್ಶನ ನೀಡುವ ಅಯ್ಯಪ್ಪಸ್ವಾಮಿಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಜ್ಯೋತಿ ದರ್ಶನ ಪಡೆದರು. ನಂತರ ಅಯ್ಯಪ್ಪಸ್ವಾಮಿಗೆ ದೀಪ ಬೆಳಗಿ ಭಕ್ತಿ ಸಮರ್ಪಿಸಿದರು.
ಮಕರ ಸಂಕ್ರಮಣ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಅಸಂಖ್ಯ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.