

ಮಡಿಕೇರಿ: ವಿರಾಜಪೇಟೆಯ ಬೇಟೋಳಿ ಪುದುಪಾಡಿ ಶ್ರೀ ಅಯ್ಯಪ್ಪ ದೇವಾಲಯದ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ದೇವಾಲಯದ ಅರ್ಚಕರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಮುಂಜಾನೆಯಿಂದಲೇ ಪವಿತ್ರ ಮಂತ್ರಗಳ ಪಠಣ ಮತ್ತು ದೀಪಗಳನ್ನು ಬೆಳಗಿಸುವುದರೊಂದಿಗೆ ಗಣಪತಿ ಹೋಮ, ಚಂಡಿಕಾ ಹವನ, ಶ್ರೀ ಲಕ್ಷ್ಮೀ ಸತ್ಯನಾರಾಯಣ ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಮಧ್ಯಾಹ್ನ ಚಂಡಿಕಾ ಹವನ ಪೂರ್ಣಾಹುತಿ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನೆರವೇರಿತು.
ಮಹೋತ್ಸವದ ಪ್ರಯುಕ್ತ ಮಂಗಳೂರಿನ ಅರ್ಚಕ ಚಂದ್ರಹಾಸ ಭಟ್‌ರವರ ಮುಂದಾಳತ್ವದಲ್ಲಿ ಲೋಕಕಲ್ಯಾಣಕ್ಕಾಗಿ ಚಂಡಿಕಾಯಾಗವನ್ನು ನೆರವೇರಿಸಲಾಯಿತು. ನೆರೆದಿದ್ದ ಭಕ್ತರು ಸ್ತೋತ್ರಗಳನ್ನು ಪಠಿಸುತ್ತಾ ಭಕ್ತಿಗೀತೆಗಳನ್ನು ಹಾಡಿದರು. ಸಮಾಜದ ಎಲ್ಲಾ ವರ್ಗದ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು. ಪುರುಷರು, ಮಹಿಳೆಯರು ಮತ್ತು ಮಕ್ಕಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಿದರು. ಹಲವಾರು ಭಕ್ತರು ಮಣ್ಣಿನ ರೂಪದಲ್ಲಿ ಇರುವ ಮೂರ್ತಿಗಳನ್ನು ಹರಕೆಯಾಗಿ ದೇವರಿಗೆ ಅರ್ಪಿಸಿದರು.
ಈ ಸಂದರ್ಭ ಕಾಸರಗೋಡಿನ ಮೊಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರು ಹಾಲ್ಚಾರು ರಾಮಚಂದ್ರನಾಯಕ್ ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳು ಮತ್ತು ಕಾರ್ಕಳದ ಶ್ರೀ ಆದಿಶಕ್ತಿ ಮಹಾಲಕ್ಷ್ಮಿ ದೇವಾಲಯದ ಆಡಳಿತ ಮೊಕ್ತೇಸರರು ಅಶೋಕ್ ನಾಯಕ್ ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳು ಹಾಜರಿದ್ದರು. ಮಹೋತ್ಸವದ ಅಂಗವಾಗಿ ದೇವಾಲಯವನ್ನು ಬಣ್ಣಬಣ್ಣದ ಹೂವುಗಳಿಂದ ಅಲಂಕರಿಸಲಾಗಿತ್ತು.