

ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಶ್ರೀ ನಿತ್ಯಾನಂದ ಆಯುರ್ವೇದ ಸಂರಕ್ಷಣಾ ಸಮಿತಿ ನೇತೃತ್ವದಲ್ಲ್ಲಿ ಔಷಧೀಯ ಗಿಡಮೂಲಿಕೆಗಳಿಂದ, ಪರಿಸರದಲ್ಲಿ ದೊರಕುವ ಗಿಡ, ಎಲೆ, ಹೂ ಇತ್ಯಾದಿಗಳನ್ನು ಬಳಸಿ ತಯಾರಿಸಿದ ಕರ್ಕಾಟಕ ಮಾಸದ ಔಷಧೀಯ ಗಂಜಿ ವಿತರಣೆ ಕಾರ್ಯಕ್ರಮ ನಡೆಯಿತು.
ಮಂಗಳೂರು ಕರ್ನಾಟಕ ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ.ರವಿರಾವ್, ಮಲಪ್ಪುರಂ ಗಂಗಾಧರನ್ ಉಣ್ಣಿ ವೈದ್ಯರ್ ಕರ್ಕಾಟಕ ಮಾಸದ ಔಷಧಿ ಗಂಜಿಯ ಮಹತ್ವದ ಬಗ್ಗೆ ಕಾರ್ಯಾಗಾರ ನಡೆಸಿಕೊಟ್ಟರು. ಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಚಾಲನೆ ನೀಡಿ, ಬಳಿಕ ಔಷಧಿ ಗಂಜಿ ಸೇವಿಸಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಶರೀರ ಸ್ವಾಸ್ಥೃ ಕಾಪಾಡಿಕೊಳ್ಳುವ ತುರ್ತು ಹೆಚ್ಚಿದೆ. ಪಾರಂಪರಿಕ ರೀತಿಯ ಆಹಾರ, ಜೀವನ ನಮ್ಮ ನಿತ್ಯ ಜೀವನದ ಭಾಗವಾಗಲಿ ಎಂದು ಕರೆ ನೀಡಿದರು.
ಕಿನ್ನಿಂಗಾರು ಸಸಿಹಿತ್ಲುವಿನ ನಾಟಿ ವೈದ್ಯೆ ಶ್ಯಾಮಲಾ ರೈ ಇವರಿಗೆ ಶ್ರೀಗಳು ಆಯುಶ್ರೀ-2024 ಪುರಸ್ಕಾರ ನೀಡಿ ಆಶೀರ್ವದಿಸಿದರು. ಶ್ರೀ ನಿತ್ಯಾನಂದ ಆಯುರ್ವೇದಿಕ್ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜೆ ಜಯದೇವನ್ ಕಣ್ಣೂರ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ತಹಸೀಲ್ದಾರ್ ಶಿಬು, ಚಂದ್ರಶೇಖರ್ ಬೆಂಗಳೂರು, ಮಂಗಳೂರಿನ ಸುಲೋಚನ ಭಟ್, ಉದ್ಯಮಿ ಶ್ರೀಧರ್ ಶೆಟ್ಟಿ ಮುಟ್ಟಂ ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಣ್ಣೂರಿನ ಖ್ಯಾತ ನಾಟಿ ವೈದ್ಯ ಪವಿತ್ರನ್ ಗುರುಕ್ಕಳ್, ಹಲಸಿನ ವಿವಿಧ ತಳಿಗಳ ಬಗ್ಗೆ ಸಂಶೋಧನೆ ನಡೆಸಿದ ಶೀಬಾ ಸತೀಶ್ ಕಣ್ಣೂರು ಅವರನ್ನು ಗೌರವಿಸಲಾಯಿತು. ಗಂಗಾಧರ್ ಕೊಂಡೆವೂರು ಸ್ವಾಗತಿಸಿ, ದಿನಕರ ಹೊಸಂಗಡಿ ವಂದಿಸಿದರು.
ವಿವಿಧ ಭಾಗಗಳಿಂದ ಆಗಮಿಸಿದ ನಾಟಿ ವೈದ್ಯರು ಪರಿಸರದ ಗಿಡ, ಎಲೆ, ಹೂಗಳನ್ನು ಮತ್ತು ಔಷಧೀಯ ಗಿಡಮೂಲಿಕೆಗಳನ್ನು ಬಳಸಿ ತಯಾರಿಸಿದ ಖಾದ್ಯವಸ್ತುಗಳಿಂದ ಕೂಡಿದ ಔಷಧೀಯ ಗಂಜಿಯನ್ನು 1000ಕ್ಕೂ ಹೆಚ್ಚು ಜನರು ಸವಿದು ಸಂತಸ ಪಟ್ಟರು.