

ಶಿವಮೊಗ್ಗ: ಮಹಿಳೆಯರು ಆರೋಗ್ಯಕರವಾಗಿದ್ದರೆ ಇಡೀ ಕುಟುಂಬ ಆರೋಗ್ಯವಾಗಿರುತ್ತದೆ. ಕುಟುಂಬ ಆರೋಗ್ಯವಾಗಿದ್ದರೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂಬ ಪರಿಕಲ್ಪನೆಯಡಿ ಭದ್ರಾವತಿ ಸೇರಿದಂತೆ ಶಿವಮೊಗ್ಗದ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿಶೇಷವಾಗಿ ಮಹಿಳೆಯರಿಗಾಗಿ ಆಯುಷ್ಮತಿ ಕ್ಲಿನಿಕ್ ಸೋಮವಾರದಿಂದ ಕಾರ್ಯಾರಂಭಗೊಂಡವು.
ಜಿಲ್ಲೆಯ ನಾಲ್ಕು ನಗರ ಪ್ರಾಥಮಿ ಆರೋಗ್ಯ ಕೇಂದ್ರಗಳಾದ ತುಂಗಾನಗರ, ಸೀಗೆಹಟ್ಟಿ, ಬೊಮ್ಮನಕಟ್ಟೆ ಮತ್ತು ಭದ್ರಾವತಿ ತಾಲೂಕಿನ ಅಶ್ವಥನಗರಗಳಲ್ಲಿ ವಿಶೇಷ ಕಲ್ಪನೆಯ ಕ್ಲಿನಿಕ್ ಆರಂಭಗೊಂಡಿದ್ದು ವಿಶೇಷವಾಗಿ ಮಹಿಳೆಯರಿಗೆ ಕ್ಲಿನಿಕ್‌ಗಳ ಸೌಲಭ್ಯ ದೊರಲಿದೆ. ಇನ್ಮುಂದೆ ಈ ನಾಲ್ಕು ಪಿಎಚ್‌ಸಿಗಳಲ್ಲಿ ಫಿಜಿಷಿಯನ್, ಮೂಳೆ ಮತ್ತು ಕೀಲು ತಜ್ಞರು, ಸರ್ಜನ್‌ಗಳು, ಮಕ್ಕಳ ತಜ್ಞರು, ಸ್ತ್ರೋರೋಗ ತಜ್ಞರು, ಕಿವಿ, ಮೂಗು ಮತ್ತು ಗಂಟಲು, ನೇತ್ರ, ಚರ್ಮರೋಗ ಹಾಗೂ ಮಾನಸಿಕರೋಗ ತಜ್ಞರು ಸಿಗಲಿದ್ದಾರೆ.
ವಾರ ಆರು ದಿನ(ಭಾನುವಾರ ಹೊರತುಪಡಿಸಿ)ವೂ ಒಬ್ಬೊಬ್ಬ ತಜ್ಞ ವೈದ್ಯರು ಕರ್ತವ್ಯ ನಿರ್ವಹಿಸುವರು. ಈಗಾಗಲೇ ನಾಲ್ಕು ಪಿಎಚ್‌ಸಿಗಳಿಗೂ ನಿವೃತ್ತ ತಜ್ಞ ವೈದ್ಯರು, ಖಾಸಗಿ ಆಸ್ಪತ್ರೆಗಳ ಕೆಲ ನುರಿತ ವೈದ್ಯರನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ.
ಯಾವೆಲ್ಲ ಸೇವೆಗಳು ಲಭ್ಯ? : ಮಹಿಳೆಯರಿಗಾಗಿ ರೂಪುಗೊಂಡ ಆಯುಷ್ಮತಿ ಕ್ಲಿನಿಕ್‌ನಲ್ಲಿ ಉಚಿತವಾಗಿ ತಪಾಸಣೆ, ಆಪ್ತ ಸಮಾಲೋಚನೆ, ಲ್ಯಾಬ್ ಪರೀಕ್ಷೆಗಳು, ಔಷಧಿ ವಿತರಣೆ, ಕ್ಷೇಮ ಚಟುವಟಿಕೆಗಳಾದ ಯೋಗ ಮತ್ತು ಧ್ಯಾನ ಹಾಗೂ ರೆಫರಲ್ ಸೇವೆಗಳು ಲಭ್ಯವಿದೆ. ಇಲ್ಲಿಂದ ರೆಫರಲ್ ಆದ ರೋಗಿಗಳಿಗೆ ಆದ್ಯತೆ ಮೇರೆಗೆ ಬೇರೆಡೆ ಚಿಕಿತ್ಸೆ ನೀಡಲಾಗುತ್ತದೆ. ಆಯುಷ್ಮತಿ ಕ್ಲಿನಿಕ್‌ಗಳಿಂದ ಜಿಲ್ಲಾಸ್ಪತ್ರೆ ಮೇಲಿನ ಒತ್ತಡ ಕೂಡ ಕಡಿಮೆ ಆಗುವ ನಿರೀಕ್ಷೆ ಇದೆ.
ತುಂಗಾನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯುಷ್ಮತಿ ಕ್ಲಿನಿಕ್‌ನ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಗುಡುದಪ್ಪ, ತಾಲೂಕು ವೈದ್ಯಾಧಿಕಾರಿ ಡಾ. ಚಂದ್ರಶೇಖರ್, ಡಾ. ಹರ್ಷವರ್ಧನ್, ತುಂಗಾನಗರ ಪಿಎಚ್‌ಸಿ ವೈದ್ಯಾಧಿಕಾರಿ ಡಾ. ಭೀಮಪ್ಪ, ಇತರೆ ತಜ್ಞ ವೈದ್ಯರು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.