

ಧಾರವಾಡ: ಆರೋಗ್ಯ ಸುರಕ್ಷತಾ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿಲ್ಲೆಯಲ್ಲಿ ಸೆ. 17ರಿಂದ ಡಿ. 31ರವರೆಗೆ ಆರೋಗ್ಯ ಇಲಾಖೆಯಿಂದ ಆಯುಷ್ಮಾನ್‌ಭವ ಆಂದೋಲನ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಆಂದೋಲನದ ನೋಡಲ್ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಪ್ರಕಟಣೆ ನೀಡಿರುವ ಅವರು, ಆಂದೋಲನದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ನೇತೃತ್ವದಲ್ಲಿ ಜಿಲ್ಲೆಯ 32 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 21 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 134 ಉಪ ಕೇಂದ್ರ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು, ನವಲಗುಂದ, ಕಲಘಟಗಿ, ಕುಂದಗೋಳ 3 ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗಳು ಸಕ್ರಿಯವಾಗಿ ಪಾಲ್ಗೊಳ್ಳಲಿವೆ.
ಮನೆ ಬಾಗಿಲಿಗೆ ಆರೋಗ್ಯ: ಆಂದೋಲನದ ಅಂಗವಾಗಿ ಆಯುಷ್ಮಾನ್ ಕಾರ್ಡ್ಗಳ ನೋದಣಿ ಮತ್ತು ವಿತರಣೆ ಮಾಡಲಾಗುವುದು. ಮನೆ ಬಾಗಲಿಗೆ ತೆರಳಿ ಆಯುಷ್ಮಾನ್ ಕಾರ್ಡ್ಗಳನ್ನು ನೀಡಲಾಗುವುದು. ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಹಾಗೂ ಇತರ ಸೇವಾಕರ್ತರ ಮುಖಾಂತರ ಕಾರ್ಡ್ ಪಡೆಯಬಹುದಾಗಿದೆ.
ಸೆ. 17ರಿಂದ ಪ್ರತಿ ಮಂಗಳವಾರ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಆರೋಗ್ಯ ಮೇಳ ಹಮ್ಮಿಕೊಳ್ಳಲಾಗುವುದು. ಅ. 2ರಂದು ಜಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಗ್ರಾಮಸಭೆ ಆಯೋಜಿಸಲಾಗುವುದು. ಸಭೆಯಲ್ಲಿ ಆಯುಷ್ಮಾನ್ ಕಾರ್ಡ್ಗಳ ವಿತರಣೆ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಪಡೆದ ಫಲಾನುಭವಿಗಳ ವಿವರಗಳನ್ನು ಪ್ರಚುರಪಡಿಸಲಾಗುವುದು.
ಆಯುಷ್ಮಾನ್ ಕಾರ್ಡ್ಗಳ ಸೃಜನೆ, ಆಯುಷ್ಮಾನ್ ಭಾರತ್ ಅಕೌಂಟ್ ತೆರೆಯುವುದು, ರಕ್ತದೊತ್ತಡ, ಮಧುಮೇಹ, ಕ್ಷಯರೋಗದ ತಪಾಸಣೆಯಂಥ ಚಟುವಟಿಕೆಗಳನ್ನು ಶೇ. 100ರಷ್ಟು ಸಾಽಸಿದ ಗ್ರಾಮ ಪಂಚಾಯಿತಿಗಳಿಗೆ ಆರೋಗ್ಯ ಗ್ರಾಮ ಪಂಚಾಯಿತಿ ಪ್ರಶಸ್ತಿಯನ್ನು ಮತ್ತು ನಗರ ಪ್ರದೇಶದಲ್ಲಿ ಆಯುಷ್ಮಾನ್ ಆರೋಗ್ಯ ವಾರ್ಡ್ ಪ್ರಶಸ್ತಿ ನೀಡಲಾಗುವುದು ಎಂದು ಜಿಲ್ಲಾಽಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.