ಹುಬ್ಬಳ್ಳಿ: ಆಯುಷ್ಮಾನ ಭಾರತ ಯೋಜನೆ ವ್ಯಾಪ್ತಿಗೆ ಇಲ್ಲಿಯ ವಿವೇಕಾನಂದ ಜನರಲ್ ಆಸ್ಪತ್ರೆ ಸೇರ್ಪಡೆಯಾಗಿದ್ದು, ಇದರಿಂದ ಈ ಭಾಗದ ಅನೇಕ ಜನರಿಗೆ ಅನುಕೂಲವಾಗಲಿದೆ ಎಂದು ಡಾ. ಅಮಿತ ಸತ್ತೂರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜೂನ್ ತಿಂಗಳಲ್ಲಿಯೇ ಇದಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಸರ್ಕಾರ ಒಪ್ಪಿಗೆ ನೀಡಿದೆ. ಮೊದಲ ಹಂತದಲ್ಲಿ ಹೃದ್ರೋಗ ವಿಭಾಗಕ್ಕೆ ಅನ್ವಯವಾಗಲಿದೆ ಎಂದರು.
ಆಯುಷ್ಮಾನ ಭಾರತ ಯೋಜನೆ ನೋಂದಣಿಗೆ ಅವಕಾಶ ಕೋರಿ ಪ್ರಸ್ತಾವನೆ ಸಲ್ಲಿಸಿದ್ದರಿಂದ ಸರ್ಕಾರ ಅನುಮೋದನೆ ನೀಡಿದೆ. ಆಸ್ಪತ್ರೆಯು ಮುಂದಿನ ವರ್ಷ ನೂರು ವರ್ಷಕ್ಕೆ ಕಾಲಿಡಲಿದೆ. ಇಲ್ಲಿ ಆರೋಗ್ಯ ಸೇವೆಗೆ ಮೊದಲ ಆದ್ಯತೆ ನೀಡಲಾಗಿದೆ. ಇಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮಾರ್ಪಾಟಾಗಿದೆ ಎಂದರು.
ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೊಠಡಿ, ನರ ರೋಗ ಶಸ್ತ್ರಚಿಕಿತ್ಸೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಕೆಲ ವೃತ್ತಿಗಳಲ್ಲಿರುವವರಿಗೆ ಪೂರ್ವ ಆರೋಗ್ಯ ತಪಾಸಣೆಯಂತಹ ಹಲವು ಯೋಜನೆಗಳು ಜಾರಿಯಲ್ಲಿವೆ ಎಂದರು.
ಹೃದಯ ಶಸ್ತ್ರಚಿಕಿತ್ಸೆ ತಜ್ಞ ಡಾ. ಶರಣ ಹಳ್ಳದ ಮಾತನಾಡಿ, ವಿವೇಕಾನಂದ ಜನರಲ್ ಆಸ್ಪತ್ರೆಯಲ್ಲಿ ಎಲ್ಲ ವಿಭಾಗಗಳು ಇರುವುದರಿಂದ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಸಾಧ್ಯವಾಗಿದೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿದೆ ಎಂದರು.
ಆಸ್ಪತ್ರೆ ಆಡಳಿತ ಮಂಡಳಿ ಅಧ್ಯಕ್ಷ ದೀಪಕ ಶಾ, ಉಪಾಧ್ಯಕ್ಷ ಕೇಶವ ದೇಸಾಯಿ, ರಾಹುಲ್ ಎಂ. ಇತರರು ಗೋಷ್ಠಿಯಲ್ಲಿದ್ದರು.