

ಚಿತ್ರದುರ್ಗ: ಜಿಲ್ಲಾದ್ಯಂತ ಆರೋಗ್ಯ ಸುರಕ್ಷತಾ ಕಾರ್ಯಕ್ರಮ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅ. 2ರವರೆಗೆ ಆರೋಗ್ಯ ಇಲಾಖೆ ಆಯುಷ್ಮಾನ್ ಭವ ಆಂದೋಲನ ಹಮ್ಮಿಕೊಂಡಿದ್ದು, ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಡಿಎಚ್‌ಒ ಡಾ.ಆರ್.ರಂಗನಾಥ್ ಸಲಹೆ ನೀಡಿದರು.
ಆರೋಗ್ಯ ಇಲಾಖೆ, ಟಿಎಚ್‌ಒ ಕಚೇರಿಯಿಂದ ಕೋಟೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಕಾರ್ಯಕ್ರಮ ಜನರಿಗೆ ತಲುಪಿಸಲು ಆಂದೋಲನದ ಮೂಲಕ ವಿವಿಧ ಚಟುವಟಿಕೆ ಆಯೋಜಿಸಲಾಗುತ್ತಿದೆ. ಜಿಲ್ಲೆಯ ಎಲ್ಲ ಪಿಎಚ್‌ಸಿ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಕ್ರಿಯವಾಗಿ ನಡೆಯಲಿದೆ ಎಂದರು.
ಆಂದೋಲನದಡಿ ಆಯುಷ್ಮಾನ್ ಕಾರ್ಡ್‌ಗಳ ನೋಂದಣಿ ಮತ್ತು ವಿತರಣೆ ಮನೆ ಬಾಗಿಲಿನಲ್ಲೇ ನೀಡಲಾಗುವುದು. ಅಲ್ಲದೆ, ಕ್ಷಯ, ಮಲೇರಿಯಾ, ಡೆಂೆ, ಚಿಕೂನ್ ಗುನ್ಯಾ, ಕೀಟ ಜನ್ಯ, ಕುಷ್ಠ ಸೇರಿ ಸಾಂಕ್ರಾಮಿಕ-ಅಸಾಂಕ್ರಾಮಿಕ ರೋಗಗಳ ಪತ್ತೆ ಹಾಗೂ ತಪಾಸಣೆ, ತಾಯಿ ಮತ್ತು ಮಕ್ಕಳ ಆರೋಗ್ಯ ಹಾಗೂ ಪೌಷ್ಠಿಕ ಆರೋಗ್ಯ ಶಿಬಿರ, ಬುಡಕಟ್ಟು ಸಮುದಾಯದವರಿಗೆ ಸಿಕ್ಕಲ್ ಸೆಲ್ ಅನಿಮೀಯಾ, ವಿವಿಧೆಡೆ ಕಣ್ಣಿನ ತಪಾಸಣೆ, ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರಿಂದ ತಪಾಸಣೆ, ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ಗಾಂಧಿ ಜಯಂತಿಯಂದು ಜಿಲ್ಲೆಯ ನಗರ ಹಾಗೂ ಎಲ್ಲ ಗ್ರಾಮಗಳಲ್ಲಿ ಆರೋಗ್ಯ ನೈರ್ಮಲ್ಯ ಮತ್ತು ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಆರೋಗ್ಯ ಇಲಾಖೆಯ ಯೋಜನೆಗಳ ಕುರಿತು ಅರಿವು ಮೂಡಿಸಲಿದ್ದಾರೆ. ಅದರ ಪ್ರಯೋಜನ ಕೂಡ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಚಂದ್ರಶೇಖರ್ ಕಂಬಳಿಮಠ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ನಾಗರಾಜ್, ಟಿಎಚ್‌ಒ ಡಾ.ಬಿ.ವಿ.ಗಿರೀಶ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್, ಬುದ್ಧನಗರ ಆರೋಗ್ಯ ಕೇಂದ್ರದ ಸಿಬ್ಬಂದಿ ಇದ್ದರು.