ಆಯುಷ್ಮಾನ್ ಭವ ಅಭಿಯಾನ- ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ್ ಮಾಹಿತಿ

Mohammad Zubair Ballari
ಮೊಹಮ್ಮದ್ ಜುಬೇರ, ಅಪರ ಜಿಲ್ಲಾಧಿಕಾರಿ, ಬಳ್ಳಾರಿ.
Published on

ಬಳ್ಳಾರಿ: ಆರೋಗ್ಯ ರಕ್ಷಣೆ ಯೋಜನೆಗಳನ್ನು ಜನರಿಗೆ ತಲುಪಿಸುವ ಗುರಿ ಹೊಂದಿದ್ದು, ಸೆ.13ರಂದು ‘ಆಯುಷ್ಮಾನ್ ಭವ’ ವಿವಿಧ ಆರೋಗ್ಯ ಕಾರ್ಯಕ್ರಮಗಳ ಅಭಿಯಾನ ಜಿಲ್ಲೆಯಲ್ಲಿ ಆರಂಭವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಅನುಷ್ಠಾನ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿ ಫಲಾನುಭವಿಗೆ ಆರೋಗ್ಯ ಯೋಜನೆಗಳನ್ನು ಅತ್ಯುತ್ತಮವಾಗಿ ತಲುಪಿಸುವ ಅಭಿಯಾನವನ್ನು ಕೇಂದ್ರ ಆರೋಗ್ಯ ಇಲಾಖೆ ಜಾರಿಗೊಳಿಸುತ್ತಿದೆ. ಪ್ರತಿ ಹಳ್ಳಿಯಲ್ಲಿ ಆರೋಗ್ಯ ಸೇವೆಗಳ ಶುದ್ಧತ್ವವು ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಮಾತನಾಡಿ, ಆಯುಷ್ಮಾನ್‌ಭವ ಎಂಬುದು ಆಯುಷ್ಮಾನ್ ಆಪ್ಕೆದ್ವಾರ 3.0 ಅನ್ನು ಒಳಗೊಂಡಿರುವ ಒಂದು ಅಭಿಯಾನವಾಗಿದ್ದು,

ಉಳಿದಿರುವ ಎಲ್ಲ ಅರ್ಹ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್‌ಗಳ ರಚನೆ ಮತ್ತು ವಿತರಣೆ ಗುರಿ ಹೊಂದಲಾಗಿದೆ.

ಆಯುಷ್ಮಾನ್ ಮೇಳದ ಭಾಗವಾಗಿ ಸಾಪ್ತಾಹಿಕ ಆರೋಗ್ಯ ಮೇಳ, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಆಯುಷ್ಮಾನ್ ಸಭೆ, ವಿವಿಧ ಆರೋಗ್ಯ ರಕ್ಷಣೆ ಯೋಜನೆಗಳು ಮತ್ತು ಸೇವೆಗಳ ಬಗ್ಗೆ ಅರಿವು ಹೆಚ್ಚಿಸಲು ನಡೆಯಲಿರುವ ಗ್ರಾಮ/ವಾರ್ಡ್ ಮಟ್ಟದ ಸಭೆಯಾಗಿದೆ ಎಂದು ವಿವರಿಸಿದರು.

ಆಯುಷ್ಮಾನ್ ಭವ ಅಭಿಯಾನದಲ್ಲಿ ಅಂಗಾಂಗ ದಾನಕ್ಕೆ ಹೆಸರು ನೋಂದಣಿಗೆ ಅವಕಾಶ ಇರಲಿದೆ. ಪ್ರತಿಯೊಬ್ಬರಿಗೂ ರಕ್ತದಾನದ ಮಹತ್ವ ತಿಳಿಸಲು ಗ್ರಾಪಂ ಸಹಕಾರದೊಂದಿಗೆ ಉಚಿತ ರಕ್ತದಾನ ಶಿಬಿರಗಳನ್ನು ಏರ್ಪಡಿಸಲಾಗುವುದು.

ಆರೋಗ್ಯದ ಲಭ್ಯತೆ ಮತ್ತು ಜಾಗೃತಿಯನ್ನು ಹೆಚ್ಚಿಸಲು ಯೋಜಿಸಲಾದ ಹಲವಾರು ಚಟುವಟಿಕೆಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ, ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ವೀರೇಂದ್ರ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net