

ಮೈಸೂರು: ಆರೋಗ್ಯ ಸೇವೆಯನ್ನು ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಮ್ಮಿಕೊಂಡಿರುವ ‘ಆಯುಷ್ಮಾನ್ ಭವ’ ಅಭಿಯಾನಕ್ಕೆ ಬನ್ನಿಮಂಟಪದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಚಾಲನೆ ದೊರೆಯಿತು.
ಅಭಿಯಾನವು ಜಿಲ್ಲೆಯಲ್ಲಿ ಸೆ.17 ರಿಂದ ಡಿ.31ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಪ್ರತಿ ಮಂಗಳವಾರ ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ. ಮೊದಲವಾರ ಅಸಾಂಕ್ರಾಮಿಕ ರೋಗಗಳ ತಪಾಸಣೆ, 2ನೇ ವಾರ ತಾಯಿ ಮತ್ತು ಮಕ್ಕಳ ಆರೋಗ್ಯ ತಪಾಸಣೆ, 3ನೇ ವಾರ ಕ್ಷಯ, ಚರ್ಮರೋಗ ಹಾಗೂ ಇತರೆ ಸಾಂಕ್ರಾಮಿಕ ಕಾಯಿಲೆಗಳ ತಪಾಸಣೆ, 4ನೇ ವಾರದಲ್ಲಿ ಕಣ್ಣಿನ ತಪಾಸಣೆ ಮತ್ತು ಸಿಕಲ್ ಸೆಲ್ ಅನೀಮಿಯಾ ಬಗ್ಗೆ ಆರೋಗ್ಯ ತಪಾಸಣೆ ನಡೆಯಲಿದೆ. ಅಲ್ಲದೆ ಆರೋಗ್ಯ ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳುವ ಕುರಿತು ಜಾಗೃತಿ ಮೂಡಿಸಲಿ ದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಪಿ. ಕುಮಾರಸ್ವಾಮಿ ಮಾತನಾಡಿ, ಯಾವುದೇ ಒಂದು ಕಾಯಿಲೆ ಬಂದ ನಂತರ ಚಿಕಿತ್ಸೆ ಪಡೆಯುವ ಬದಲು ಕಾಯಿಲೆ ಬಾರದ ಹಾಗೆ ತಡೆಗಟ್ಟುವುದು ಅತ್ಯಂತ ಮುಖ್ಯ. ಹಲವಾರು ಕಾಯಿಲೆಗಳನ್ನು ಆರಂಭದಲ್ಲಿಯೇ ಗುರುತಿಸಿದರೆ ಸುಲಭವಾಗಿ ತಡೆಗಟ್ಟಬಹುದು. ಈ ಹಿನ್ನೆಲೆಯಲ್ಲಿ ಆಯುಷ್ಮಾನ್ ಭವ ಅಭಿಯಾನದಡಿ ಜನರ ಆರೋಗ್ಯ ತಪಾಸಣೆಗೆ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರತಿ ವರ್ಷ ಸರಾಸರಿ 38 ಸಾವಿರ ಗರ್ಭಿಣಿಯರು ನೋಂದಣಿಯಾಗುತ್ತಿದ್ದಾರೆ. 35 ಸಾವಿರ ಮಕ್ಕಳಿಗೆ ಹತ್ತು ವಿಧದ ಲಸಿಕೆಯನ್ನು ನೀಡುತ್ತಿದ್ದೇವೆ. ಹುಟ್ಟಿದ ಮಗುವಿನಿಂದ ಹಿಡಿದು 16 ವರ್ಷದ ಮಕ್ಕಳವರೆಗೆ ಲಸಿಕಾ ಕಾರ್ಯಕ್ರಮ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಆಸ್ಪತ್ರೆಗಳು, 525 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 6 ನಮ್ಮ ಕ್ಲಿನಿಕ್‌ಗಳ ಮೂಲಕ ಜನರ ಆರೋಗ್ಯ ಕಾಪಾಡಲು ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಪಿ. ಶಿವರಾಜು ಮಾತನಾಡಿ, ಶಿಕ್ಷಣ, ಆರೋಗ್ಯವನ್ನು ನೀಡುವುದು ಹಾಗೂ ಬಡತನ ನಿರ್ಮೂಲನೆ ಮಾಡು ವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ನಮಗೆ ಶಿಕ್ಷಣ ದೊರೆಯದೆ ಇದ್ದರೂ, ನಮ್ಮ ಬಡತನ ನಿರ್ಮೂಲನೆಯಾಗದೆ ಇದ್ದರೂ ನಾವು ಬದುಕಬಹುದು. ಆದರೆ, ನಮ್ಮ ಆರೋಗ್ಯ ಕೈಕೊಟ್ಟರೆ ಬದುಕುಳಿಯಲು ಸಾಧ್ಯವಿಲ್ಲ. ಹೀಗಾಗಿ ಆರೋಗ್ಯ ಸೇವೆ ಪ್ರತಿಯೊಬ್ಬ ರಿಗೂ ಅತ್ಯಂತ ಅವಶ್ಯಕ. ಪ್ರತಿಯೊಬ್ಬರು ಆಗಿಂದಾಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಗರ ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್, ನಗರ ಪಾಲಿಕೆ ಸದಸ್ಯೆ ರೇಷ್ಮಾ ಬಾನು, ಆರ್‌ಸಿಎಚ್ ಅಧಿಕಾರಿ ಡಾ.ಜಯಂತ್, ಜಿಲ್ಲಾ ರೋಗವಾಹಕ ಆಶ್ರಿತರೋಗಗಳ ನಿಯಂತ್ರಣಾಧಿಕಾರಿ ಡಾ.ಚಿದಂಬರ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಗೋಪಿನಾಥ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಶಿರಾಜ್ ಅಹ್ಮದ್, ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಲೋಕೇಶ್ ಹಾಗೂ ಇತರರು ಇದ್ದರು.