ದ.ಕ. ಜಿಲ್ಲೆಯ 65 ಆಸ್ಪತ್ರೆ ಆಯುಷ್ಮಾನ್ ವ್ಯಾಪ್ತಿಗೆ

koat new
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 65 ಆಸ್ಪತ್ರೆಗಳನ್ನು ‘ಆಯುಷ್ಮಾನ್ ಭಾರತ್’ ಯೋಜನೆ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ. ಈ ಮೂಲಕ ಜನರು ಕರೊನಾ ಉಚಿತ ಚಿಕಿತ್ಸೆ ಪಡೆಯಲು ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ, ಬಂದರು ಮತ್ತು ಮೀನುಗಾರಿಕೆ ಹಾಗೂ ಹಿಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

‘ವಿಜಯವಾಣಿ’ ಕಚೇರಿಯಲ್ಲಿ ಶುಕ್ರವಾರ ಸಂವಾದದಲ್ಲಿ ಪಾಲ್ಗೊಂಡ ಅವರು, ಈಗಾಗಲೇ 8 ಮೆಡಿಕಲ್ ಕಾಲೇಜು ಸೇರಿದಂತೆ 9 ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಮೂಲಕ ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 24 ಆಸ್ಪತ್ರೆಗಳು ಆಯುಷ್ಮಾನ್ ಭಾರತ್ ನೋಂದಣಿ ಹಂತದಲ್ಲಿವೆ. ಜಿಲ್ಲೆಯಲ್ಲಿರುವ 50 ಬೆಡ್‌ಗಿಂತ ಹೆಚ್ಚಿನ ಆಸ್ಪತ್ರೆಗಳೆಲ್ಲವೂ ಇದರಲ್ಲಿ ನೋಂದಣಿಯಾಗುವಂತೆ ಸೂಚನೆ ನೀಡಲಾಗಿದೆ ಎಂದರು.

ಕರೊನಾ ನಿರ್ವಹಣೆಯಲ್ಲಿ ಬೆಂಗಳೂರು ಬಿಟ್ಟರೆ ಅತೀ ದೊಡ್ಡ ಸವಾಲು ಹೊಂದಿದ್ದು ದ.ಕ ಜಿಲ್ಲೆ. ಇಲ್ಲಿ 8 ಮೆಡಿಕಲ್ ಕಾಲೇಜು ಆಸ್ಪತ್ರೆಗಳು ಇರುವುದರಿಂದ ವಿವಿಧೆಡೆಗಳಿಂದ ರೋಗಿಗಳು ಬರುತ್ತಾರೆ. ಆಯುಷ್ಮಾನ್ ಭಾರತ ಯೋಜನೆಯ ನೆರವು, 40 ಸಾವಿರ ಆ್ಯಂಟಿಜೆನ್ ಟೆಸ್ಟ್ ನೆರವಿನೊಂದಿಗೆ ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದೇವೆ. ಎಲ್ಲ ಮೆಡಿಕಲ್ ಕಾಲೇಜು ಆಸ್ಪತ್ರೆಗಳ ಶೇ.50ರಷ್ಟು ಬೆಡ್ ವಶಕ್ಕೆ ಪಡೆದಿದ್ದೇವೆ. ಆ ಆಸ್ಪತ್ರೆಗಳಲ್ಲಿ ನಾವೇ ಸಂಬಳ ಕೊಟ್ಟು ಮೂರು ಪಾಳಿಯಲ್ಲಿ ಕೆಲಸ ಮಾಡಲು ಆರೋಗ್ಯ ಮಿತ್ರರನ್ನು ನೇಮಕ ಮಾಡಿದ್ದೇವೆ. ವೆಂಟಿಲೇಟರ್ ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೂ ತಲಾ ಮೂರರಂತೆ ಕೊಡಲಾಗಿದೆ. ಎಂದು ವಿವರಿಸಿದರು.

ಡ್ರಗ್ ಕುರಿತು ಕಠಿಣ ಕ್ರಮ: ಬೆಂಗಳೂರಿನಲ್ಲಿ ಗೃಹ ಸಚಿವರು ಡ್ರಗ್ಸ್ ಕುರಿತು ವಿವರಣೆ ನೀಡಿದ 24 ಗಂಟೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಸಭೆ ನಡೆಸಲಾಗಿದೆ. ಎಂತಹ ಕಠಿಣ ಪರಿಸ್ಥಿತಿ ಇದ್ದರೂ ಡ್ರಗ್ಸ್ ಜಾಲವನ್ನು ಯಾವುದೇ ದಾಕ್ಷಿಣ್ಯಕ್ಕೊಳಗಾಗದೆ ಮಟ್ಟಹಾಕಲು ಸೂಚನೆ ನೀಡಿದ್ದೇನೆ ಎಂದು ಕೋಟ ತಿಳಿಸಿದರು. ಶಾಲೆ ಮುಂಭಾಗ, ಗಲ್ಲಿಗಳಲ್ಲಿ, ಧಾರ್ಮಿಕ ಸಂಸ್ಥೆಗಳ ಸಮೀಪ ಮಾದಕ ವಸ್ತು, ಕೋಕೈನ್, ಹೆರಾಯಿನ್ ಮಾರಾಟ ಮಾಡುವುದನ್ನು ನಿಯಂತ್ರಿಸಲಾಗುವುದು, ಅದಕ್ಕಾಗಿ ಇಂಟೆಲಿಜೆನ್ಸ್ ಬಲಪಡಿಸಲಾಗುವುದು ಎಂದರು.

ಫಿಶ್ ಫುಡ್ ಪಾರ್ಕ್: ಕರಾವಳಿಯಲ್ಲಿ ಫಿಶ್ ಫುಡ್ ಪಾರ್ಕ್ ನಿರ್ಮಾಣ ಮಾಡುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕೆ 100 ಕೋಟಿ ರೂ. ಅಗತ್ಯವಿದೆ. ಇದಕ್ಕಾಗಿ ಪುತ್ತೂರು, ಮೂಡುಬಿದಿರೆ ಹಾಗೂ ಮಂಗಳೂರು ಎಸ್‌ಇಝಡ್ ವ್ಯಾಪ್ತಿಯಲ್ಲಿ ಜಾಗ ನೋಡಲಾಗುತ್ತಿದೆ ಎಂದೂ ತಿಳಿಸಿದರು.

ಅನ್ನದಾನ ಸದ್ಯಕ್ಕಿಲ್ಲ: ಮುಜರಾಯಿ ಇಲಾಖೆ ಅಧೀನದ ಎಲ್ಲ ದೇವಸ್ಥಾನಗಳಲ್ಲಿ ಬಹುತೇಕ ಸೇವೆಗಳನ್ನು ಆರಂಭಿಸುವ ಮೂಲಕ ಭಕ್ತರಿಗೆ ಅನುಕೂಲ ಕಲ್ಪಿಸಲಾಗಿದೆ. ಸದ್ಯ ಅನ್ನದಾನ ಮತ್ತು ಮೆರವಣಿಗೆ ನಡೆಸುವಂಥ ಸೇವೆಗಳಿಗೆ ಮಾತ್ರ ನಿರ್ಬಂಧವಿದೆ. ಅದನ್ನೂ ಹಂತಹಂತವಾಗಿ ತೆರವುಗೊಳಿಸಲಾಗುವುದು ಎಂದು ಸಚಿವ ಕೋಟ ತಿಳಿಸಿದರು.

ಬೋಟ್ ಆಂಬುಲೆನ್ಸ್: ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ ಸಂದರ್ಭ ಬೋಟ್ ದುರಂತ ಸಹಿತ ಮೀನುಗಾರರು ಅಪಾಯಕ್ಕೆ ಸಿಲುಕಿದ ಸಂದರ್ಭ ವೈದ್ಯಕೀಯ ನೆರವು ಸಹಿತ ರಕ್ಷಣೆಗೆ ಕೇರಳ ಮಾದರಿಯಲ್ಲಿ, ಅದಕ್ಕಿಂತಲೂ ಉತ್ತಮ ಸೌಲಭ್ಯವಿರುವ ಬೋಟ್ ಆಂಬುಲೆನ್ಸ್ ಒದಗಿಸುವ ಚಿಂತನೆ ಇದೆ. ಈ ಕುರಿತು ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ನಾಡದೋಣಿ ಮೀನುಗಾರರು ಜಾಕೆಟ್ ಧರಿಸುವುದನ್ನೂ ಕಡ್ಡಾಯಗೊಳಿಸಲು ಸೂಚಿಸಲಾಗಿದೆ ಎಂದರು.

ಮರಳುಗಾರಿಕೆ ಹೊಸ ಮಾದರಿ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗಣಿ ಅಧಿಕಾರಿ, ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಿಗರ ಸಮಿತಿಯು ಮರಳು ಅಂದಾಜಿಸಿ, ಪ್ರತಿ ಯುನಿಟ್‌ಗೆ 300 ರೂಪಾಯಿಯಂತೆ ವಿಲೇವಾರಿ ನಡೆಸುತ್ತದೆ. ನಾನ್ ಸಿಆರ್‌ಜಡ್ ವ್ಯಾಪ್ತಿಯಲ್ಲಿ ಎಂಎಸ್‌ಐಎಲ್ ಮೂಲಕ ಟೆಂಡರ್ ರಹಿತವಾಗಿ ಮರಳು ವಿಲೇವಾರಿಯಾಗಲಿದೆ ಎಂದು ಸಚಿವರು ತಿಳಿಸಿದರು.

ಇತ್ತೀಚೆಗೆ ಕೊಡೇರಿ ದೋಣಿ ದುರಂತ ಸಂಭವಿಸಿದ್ದು ಕಣ್ಣಮುಂದೆಯೇ ಇದೆ. ಅಂಥ ಸಂದರ್ಭ ಹೆಲಿಕಾಫ್ಟರ್ ಬರುವುದಿದ್ದರೂ ಗಂಟೆಗಟ್ಟಲೆ ಸಮಯ ಹಿಡಿಯುತ್ತದೆ. ಇದಕ್ಕೆ ಪರಿಹಾರವಾಗಿ ಕರಾವಳಿ ಕಾವಲು ಪಡೆಯ ಜತೆ ಬೋಟ್ ಆಂಬುಲೆನ್ಸ್ ವ್ಯವಸ್ಥೆ ಮಾಡುವ ಕುರಿತು ಚರ್ಚೆ ನಡೆದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net