

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪುರಾತನ ಆಯುಷ್ ಪದ್ಧತಿಯಲ್ಲಿ ಚಿಕಿತ್ಸೆ ಪಡೆಯಲು ಜನರ ಒಲವು ಹೆಚ್ಚುತ್ತಿದೆ. ಈ ಭಾಗದಲ್ಲಿನ ಆಯುಷ್ ಆಸ್ಪತ್ರೆಗಳಲ್ಲಿ 8,947 ಪುರುಷರು ಮತ್ತು 7,754 ಮಹಿಳೆಯರು, 1,114 ಮಕ್ಕಳು ಸೇರಿ 17,815 ಜನರು (ನವೆಂಬರ್ ಅಂತ್ಯಕ್ಕೆ) ಚಿಕಿತ್ಸೆ ಪಡೆದುಕೊಂಡಿದ್ದು ಸಹಜವಾಗಿ ಬೇಡಿಕೆ ಕಂಡುಬಂದಿದೆ. ಇದರ ನಡುವೆ ಪ್ರಚಾರದ ಕೊರತೆ ಕಾಡುತ್ತಿದ್ದು, ಮತ್ತಷ್ಟು ಪ್ರಮಾಣದಲ್ಲಿ ಜನರಿಗೆ ಮಾಹಿತಿ ತಲುಪಬೇಕಾಗಿದೆ.
ಆಧುನಿಕ ಸಲಕರಣೆ ಒದಗಿಸಿ
ಜಿಲ್ಲೆಯ ಜನಸಂಖ್ಯೆಗೆ ಹೋಲಿಸಿದ್ದಲ್ಲಿ ಇಲ್ಲಿನ ಕೇಂದ್ರಗಳಲ್ಲಿ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ರೋಗಿಗಳು ನೋಂದಾಯಿಸಿಕೊಂಡು ಚಿಕಿತ್ಸೆ ಪಡೆಯಬೇಕಾಗಿದೆ. 13 ಲಕ್ಷ ಜನಸಂಖ್ಯೆಗೆ 20 ಸಾವಿರ ಒಳಗಿನ ಜನರಿಗೆ ಸೇವೆ ಸಿಕ್ಕಿದೆ. ಇದಕ್ಕೆ ವ್ಯಾಪಕ ಪ್ರಚಾರದ ಕೊರತೆಯೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಜಿಲ್ಲೆ ಬೆಂಗಳೂರಿಗೆ ಸನಿಹದಲ್ಲಿವೆ. ಇದಕ್ಕೆ ಈ ಭಾಗದ ಅನೇಕರು ದೂರದ ಕೇಂದ್ರಗಳಿಗೆ ತೆರಳಿ ದುಬಾರಿ ದರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಹೊರರಾಜ್ಯ ಮತ್ತು ದೇಶಗಳಲ್ಲಿನ ಸೇವೆಯ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದರೂ ಸ್ಥಳೀಯ ಚಿಕಿತ್ಸಾಲಯಗಳ ಕಾರ್ಯ ನಿರ್ವಹಣೆಯ ಕಡೆಗೆ ಗಮನ ಕಡಿಮೆ ಇದೆ. ಇಲಾಖೆಯ ಅಧಿಕಾರಿಗಳು ಬಹುತೇಕ ವರ್ಷಕ್ಕೊಮ್ಮೆ ನಿಗದಿತ ದಿನದ ಪ್ರಚಾರ ಕಾರ್ಯಕ್ರಮಕ್ಕೆ ಸೀಮಿತವಾಗುತ್ತಿದ್ದಾರೆ. ಮತ್ತೊಂದೆಡೆ ಚಿಕಿತ್ಸಾ ಕೇಂದ್ರಗಳಿಗೆ ಹೆಚ್ಚಿನ ಸಿಬ್ಬಂದಿ, ಆಧುನಿಕ ಸಲಕರಣೆಗಳನ್ನು ಒದಗಿಸಬೇಕಾಗಿದೆ. ಹಾಗೆಯೇ ಆಯಾ ವ್ಯಾಪ್ತಿಯಲ್ಲಿ ಲಭ್ಯ ಸೇವೆ, ಮಹತ್ವದ ಬಗ್ಗೆ ಪ್ರಚಾರ ಕೈಗೊಳ್ಳಬೇಕಾಗಿದೆ. ಜತೆಗೆ ಉತ್ತಮ ರೀತಿಯ ಸ್ಪಂದನೆಯ ಅಗತ್ಯವಿದೆ.
ಬೇಡಿಕೆಯ ನಿರೀಕ್ಷೆ
ಆಯುಷ್ ಪದ್ದತಿಯ ಚಿಕಿತ್ಸೆಯನ್ನು ಪಡೆಯಲು ಬಯಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಜಿಲ್ಲಾಸ್ಪತ್ರೆಯಲ್ಲೂ ವಿಶೇಷ ಘಟಕ ತೆರೆದಿದ್ದು, ಶೀಘ್ರದಲ್ಲಿಯೇ ವರಮಲ್ಲೇನಹಳ್ಳಿಯಲ್ಲಿ 50 ಹಾಸಿಗೆಗಳ ಆಯುಷ್ ಆಸ್ಪತ್ರೆ ಸ್ಥಾಪಿಸಲಾಗುವುದು ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚಿಂತಾಮಣಿಯಲ್ಲಿ ಹೆಚ್ಚು
ಜಿಲ್ಲೆಯ ತಾಲೂಕುಗಳ ಪೈಕಿ ಚಿಂತಾಮಣಿಯಲ್ಲಿ ಮೂರು ಚಿಕಿತ್ಸಾಲಯಗಳಿವೆ. ಜಿಲ್ಲೆಯಲ್ಲಿ ನೋಂದಾಯಿತ ಹೊರರೋಗಿಗಳ ಪ್ರಮಾಣದಲ್ಲಿ ಹೆಚ್ಚಿನ ಜನರು (ಶೇ.50ಕ್ಕೂ ಹೆಚ್ಚು ) ಇದ್ದು, 9944 ಚಿಕಿತ್ಸೆ ಪಡೆದುಕೊಂಡಿದ್ದಾರೆ.
"ಭಾರತೀಯ ಸಂಸ್ಕೃತಿ, ಕಲೆ ಮತ್ತು ಸಂಪ್ರದಾಯಕ್ಕೆ ಪ್ರತೀಕ, ಹಿರಿಯ ತಲೆಮಾರಿನ ಪ್ರಮುಖ ಕೊಡುಗೆಯಾದ ಆಯುಷ್ ಚಿಕಿತ್ಸೆ ಪರಿಣಾಮಕಾರಿ ವಿಧಾನವಾಗಿದೆ. ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಇದರ ಬಗ್ಗೆ ವ್ಯಾಪಕ ಅರಿವು ಮೂಡಿಸಿ, ಆಯುಷ್ ಚಿಕಿತ್ಸಾಲಯಗಳಲ್ಲಿ ಮತ್ತಷ್ಟು ಪರಿಣಾಮಕಾರಿ ಸೇವೆ ಲಭಿಸುವಂತಾಗಲು ಕ್ರಮ ಕೈಗೊಳ್ಳಬೇಕು." - ಮುನಿರಾಜು ಸ್ಥಳೀಯ ನಿವಾಸಿ, ಚಿಕ್ಕಬಳ್ಳಾಪುರ