

ಹುಬ್ಬಳ್ಳಿ : ನಗರದ ಆಯುರ್ವೆದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಆಯುಷ್ ಫೆಡೆರೇಶನ್ ಆಫ್ ಇಂಡಿಯಾ ಸಹಯೋಗದಲ್ಲಿ ‘ಸಾಮಾನ್ಯ ಕ್ಯಾನ್ಸರ್ ರೋಗಗಳು ಹಾಗೂ ಅವುಗಳ ನಿರ್ಣಯೋಪಾಯ‘ ವಿಷಯ ಕುರಿತು ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಆಯುರ್ವೆದ ಮಹಾವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ. ಬಿ.ಆರ್. ಪಾಟೀಲ, ವಿವಿಧ ಬಗೆಯ ಕ್ಯಾನ್ಸರ್ ರೋಗಗಳು, ಅವುಗಳ ಲಕ್ಷಣ, ರೋಗ ನಿರ್ಣಯ ಹಾಗೂ ಚಿಕಿತ್ಸಾ ಕ್ರಮಗಳ ಬಗ್ಗೆ ಉಪನ್ಯಾಸ ನೀಡಿದರು.
ಆಯುರ್ವೆದ ಮಹಾವಿದ್ಯಾಲಯ ಶಲ್ಯತಂತ್ರ ವಿಭಾಗದ ಪ್ರಾಧ್ಯಾಪಕ ಡಾ. ಸಿದ್ದನಗೌಡ ಪಾಟೀಲ ಹಾಗೂ ಸಂಸ್ಥೆಯ ಪ್ರಾಚಾರ್ಯ ಡಾ. ಎ.ಎಸ್. ಪ್ರಶಾಂತ ಅವರು, ಆಸ್ಪತ್ರೆಯ ಶಸ್ತ್ರಾಗಾರದಲ್ಲಿರುವ ವ್ಯವಸ್ಥೆ ಹಾಗೂ ವಿವಿಧ ರೋಗಗಳಿಗೆ ನೀಡುವ ಚಿಕಿತ್ಸೆ, ಶಸ್ತ್ರಚಿಕಿತ್ಸೆಗಳ ಬಗ್ಗೆ ಪರಿಚಯ ನೀಡಿದರು.
ಡಾ. ಬಿ.ಬಿ. ಪಾಟೀಲ, ಡಾ. ರವೀಂದ್ರ ವೈ., ಡಾ. ಆನಂದ ಹುಲಮನಿ, ಡಾ. ಎಸ್.ಎಸ್. ಪಾಟೀಲ, ಎಎಫ್ಐ ಸದಸ್ಯರು, ನಗರದ ಪ್ರಮುಖ ವೈದ್ಯರು, ಮಹಾವಿದ್ಯಾಲಯದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಡಾ. ಉಶಾ ಹೊಸಮನಿ ಸ್ವಾಗತಿಸಿದರು. ಡಾ. ಮಹಾವೀರ ಹಾವೇರಿ ವಂದಿಸಿದರು.