ಆಯುರ್ವೇದ ಗಿಡಗಳನ್ನು ನೆಟ್ಟು ಬೆಳೆಸಬೇಕು : ಪೇಜಾವರ ಶ್ರೀ ಕರೆ

pejavarshree Shri
Published on

ಮೈಸೂರು: ಆಯುರ್ವೇದ ಗಿಡಗಳನ್ನು ನೆಡುವ ಅಭಿಯಾನ ಹಮ್ಮಿಕೊಳ್ಳುವ ಅವಶ್ಯಕತೆ ಇದೆ ಎಂದು ಉಡುಪಿಯ ಪೇಜವಾರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಎಂದು ಹೇಳಿದರು.

ಅಂತಾರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಆಯುರ್ವೇದ ಸಂಶೋಧನ ಕೇಂದ್ರದಲ್ಲಿ ಹಮ್ಮಿಕೊಂಡ ಆಯುರ್ವೇದ ಉತ್ಸವಕ್ಕೆ ವಿಜಯವಿಠ್ಠಲ ಶಾಲೆಯಲ್ಲಿ ಧನ್ವಂತರಿ ಮಾತೆಯ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ತುಳಸಿಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಶ್ರೀರಾಮಚಂದ್ರ, ಕೃಷ್ಣ ಪರಮಾತ್ಮರ ಕಾಲದಿಂದಲೂ ದೈನಂದಿನ ಚಟುವಟಿಕೆ ಹಾಗೂ ಆಹಾರ ಪದ್ದತಿಯಲ್ಲಿ ಆಯುರ್ವೇದ ಬಳಕೆಯ ಪರಂಪರೆ ಬಂದಿದೆ. ತುಳಸಿಯನ್ನು ಪ್ರಾರ್ಥನೆ ಪೂಜಾ ಕೈಂಕರ್ಯಕ್ಕೆ ಬಳಕೆ ಮಾಡಲಾಗುತ್ತದೆ. ತುಳಸಿ ಪೂಜೆಯಿಂದ ಜನರಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದರು.

ಎಲ್ಲರ ಮನೆಗಳ ಮುಂದೆ ತುಳಸಿ ಗಿಡ ಸೇರಿದಂತೆ ಇನ್ನಿತರ ಆಯುರ್ವೇದ ಗಿಡಗಳಿಗೆ ನೀರೆರದು ಪೋಷಿಸಿದರೆ ಪರಿಸರ ಸಂರಕ್ಷಣೆಯಾಗಿ ರೋಗರುಜಿನಗಳು ನಿವಾರಣೆಯಾಗುತ್ತವೆ. ಸಂಘ ಸಂಸ್ಥೆಗಳು, ಯುವ ಸಮೂಹ ಹೆಚ್ಚಾಗಿ ಆಯುರ್ವೇದ ಗಿಡಗಳನ್ನು ನೆಡುವ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಕರೆ ನೀಡಿದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷ ಆಯುರ್ವೇದ ದಿನಾಚರಣೆ ಸಂದರ್ಭ ವಿಶೇಷ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಈ ಬಾರಿ ಹರ್ ಗರ್ ಆಯುರ್ವೇದ ಶೀರ್ಷಿಕೆಯ ಮೂಲಕ ಆಯುಷ್ ಇಲಾಖೆ ಮನೆ ಮನೆಗಳಿಗೆ ಆಯುರ್ವೆದ ಗಿಡಗಳ ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಆಯುರ್ವೇದ ಸಾವಿರಾರು ವರ್ಷಗಳಿಂದ ಭಾರತದಲ್ಲಿದೆ. ನಮ್ಮ ಪೂರ್ವಜರು ಆಯುರ್ವೇದವನ್ನು ಆಹಾರ ಪದ್ದತಿಯಲ್ಲಿ ಹೆಚ್ಚಾಗಿ ಬಳಸುತ್ತಿದ್ದ ಕಾರಣ ನೂರಾರು ವರ್ಷ ಬದುಕುತ್ತಿದ್ದರು, ಯುವಪೀಳಿಗೆ ಈ ಬಗ್ಗೆ ಹೆಚ್ಚಾಗಿ ತಿಳಿದುಕೊಂಡು ಆಯುರ್ವೇದ ಬಳಸುವಲ್ಲಿ ಬಳಸಿದರೆ ಆರೋಗ್ಯಕರ ವಾತಾವರಣ ನಿರ್ಮಿಸಬಹುದು ಎಂದು ಅಭಿಪ್ರಾಯಪಟ್ಟರು.

ಆಯುಷ್ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಆಂಜನೇಯಮೂರ್ತಿ, ಜೆಎಸ್‌ಎಸ್ ಆಯುರ್ವೇದ ಕಾಲೇಜಿನ ಹಿರಿಯ ವೈದ್ಯ ಗುರುಬಸವರಾಜು, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಲಕ್ಷ್ಮೀನಾರಾಯಣ್, ವಿಜಯವಿಠ್ಠಲ ಶಾಲೆಯ ಕಾರ್ಯದರ್ಶಿ ವಾಸುದೇವ ಭಟ್, ಆಯುರ್ವೇದ ಕಾಲೇಜಿನ ಮುಖ್ಯಸ್ಥರಾದ ರಾಧಾಕೃಷ್ಣ, ಡಾ. ಮಧುಕುಮಾರ್, ಪತಂಜಲಿ ಯೋಗಾ ಸಂಸ್ಥೆಯ ಮುಖ್ಯಸ್ಥ ಶಶಿಕುಮಾರ್, ಪತ್ರಕರ್ತರಾದ ಅನಿಲ್ ಕುಮಾರ್, ಪ್ರಭಾಕರ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಬಿಜೆಪಿ ಚಾಮರಾಜ ಕ್ಷೇತ್ರದ ಯುವ ಘಟಕದ ಅಧ್ಯಕ್ಷ ಸಚಿನ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net