ಪ್ರತಿ ತಿಂಗಳು ಆಯುರ್ವೇದ ತಪಾಸಣೆ ಶಿಬಿರ

20-kollegal&1,,,
Published on

ಕೊಳ್ಳೇಗಾಲ: ತಾಲೂಕಿನ ಚಿಲಕವಾಡಿ ಶ್ರೀಶಂಭುಲಿಂಗೇಶ್ವರ ಬೆಟ್ಟದ ನಿಜಗುಣ ಮಠದಲ್ಲಿ ಇತ್ತೀಚೆಗೆ ಶ್ರೀನಿಜಗುಣ ಫೌಂಡೇಷನ್, ಗೋ ಸೇವಾ ಕರ್ನಾಟಕದ ದಕ್ಷಿಣ ಪ್ರಾಂತ್ಯ ಯೂತ್ ಫಾರ್ ಸೇವಾ ಹಾಗೂ ಆಯುಷ್ ಇಲಾಖೆ ಚಾಮರಾಜನಗರ ಇವರ ಸಹಯೋಗದೊಂದಿಗೆ ಆಯುರ್ವೇದ ಆರೋಗ್ಯ ತಪಾಸಣೆ ಉಚಿತ ಶಿಬಿರವನ್ನು ಆಯೋಜಿಸಲಾಗಿತ್ತು.


ಶಿಬಿರವನ್ನು ಗೋವು ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಶ್ರೀಬಾಲಷಡಕ್ಷರ ಸ್ವಾಮೀಜಿ ಮಾತನಾಡಿ, ಶ್ರೀ ಮಠದಿಂದ ಈ ಭಾಗದ ಜನರಿಗೆ ಅಗತ್ಯವಿರುವ ಮಂಡಿ ನೋವು, ಬಿಪಿ, ಶುಗರ್, ಆಸ್ತಮಾ, ಕಿಡ್ನಿ ಸ್ಟೋನ್ ಹಾಗೂ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳಿಗೆ ನಾಟಿ ಗೋ ಆಧಾರಿತ ಆಯುರ್ವೇದ ಔಷಧೀಯ ಚಿಕಿತ್ಸೆ ಮೂಲಕ ಸೂಕ್ತ ಪರಿಹಾರ ನೀಡುವುದಕ್ಕಾಗಿ ಪ್ರತಿ ತಿಂಗಳು 5ರಂದು ಮಠ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಶಿಬಿರ ಏರ್ಪಡಿಸಲಾಗುತ್ತದೆ ಎಂದು ತಿಳಿಸಿದರು.


ಕ್ಯಾನ್ಸರ್ ತಜ್ಞ ವ್ಯೆದ್ಯ ಡಾ.ಡಿ.ಪಿ.ರಮೇಶ್ ಮಾತನಾಡಿ, ಆಯುರ್ವೇದ ನಿಂತಿರುವುದೇ ನಾಟಿ ಗೋವಿನ ಹಾಲು, ಮೊಸರು, ಬೆಣ್ಣೆ, ತುಪ್ಪ, ಗೋಮೂತ್ರ, ಗೋಮಯ ಇವು ಗಳ ಆಧಾರಿತವಾಗಿಯೇ. ಯಾವುದೇ ಕಾಯಿಲೆಯ ತ್ರಿದೋಷಗಳನ್ನು ಸಾಮಾನ್ಯ ಸ್ಥಿತಿಗೆ ತಂದು ಚಿಕಿತ್ಸೆ ನೀಡಿದರೆ ಅದಕ್ಕೆ ಪರಿಹಾರ ಸಾಧ್ಯ. ಕ್ಯಾನ್ಸರ್ ಕಾಯಿಲೆಗೆ ಲಕ್ಷಾಂತರ ರೂ.ವ್ಯಯಿಸಿ ಫಿಜಿಯೋಥೆರಪಿ, ರೇಡಿಯೋಥೆರಪಿ ಚಿಕಿತ್ಸೆ ಮಾಡಿಸಿದರೂ ಸುಧಾರಣೆ ಸಾಧ್ಯವಿಲ್ಲ. ಅಲ್ಲದೆ ಯಾವುದೇ ಕಾಯಿಲೆಗೆ ಇಂಗ್ಲಿಷ್ ಔಷಧ ತೆಗೆದುಕೊಂಡರೆ ಮತ್ತೊಂದು ಕಾಯಿಲೆ ಉಚಿತವಾಗಿ ದೊರೆಯುತ್ತದೆ. ನಮ್ಮ ಆಯುರ್ವೇದ ಪಂಚಗವ್ಯ ಚಿಕಿತ್ಸಾ ಪದ್ಧತಿ ಮೂಲಕ ಸಂಪೂರ್ಣ ಸುಧಾರಣೆ ಸಾಧ್ಯವಿದೆ ಎಂದರು.


ಇತ್ತೀಚಿನ ದಿನಗಳಲ್ಲಿ ನಾವು ಉಪಯೋಗಿಸುವ ಆಹಾರ ಪದ್ಧತಿಯೇ ಕ್ಯಾನ್ಸರ್‌ಗೆ ಕಾರಣವಾಗಿದೆ. ದಿನಚರ್ಯ, ಋತುಚರ್ಯ ಮತ್ತು ಮಾನಸಿಕ ಸ್ಥಿತಿಯನ್ನು ಸರಿಯಾಗಿ ಅಳವಡಿಸಿಕೊಳ್ಳುವುದರಿಂದ ಕ್ಯಾನ್ಸರ್ ತಡೆಗಟ್ಟಬಹುದು ಎಂದು ತಿಳಿಸಿದರು.


ಮಾಜಿ ಶಾಸಕ ಎನ್.ಮಹೇಶ್ ಮಾತನಾಡಿ, ಆಯುರ್ವೇದ ಎಂದರೆ ಆಯಸ್ಸನ್ನು ವೃದ್ಧಿಗೊಳಿಸಿಕೊಳ್ಳುವುದು. ಆಯೂರ್ ಪ್ಲಸ್ ವೇದ ಆರೋಗ್ಯ ಕಾಪಾಡಿಕೊಳ್ಳುವ ವಿದ್ಯೆಯೇ ಆಯುರ್ವೇದ, ನಮ್ಮ ಪರಿಸರದಲ್ಲಿ ಇರುವಂತಹ ಗಿಡಮೂಲಿಕೆಗಳಿಂದಲೇ ಅನೇಕ ರೋಗಗಳಿಗೆ ಔಷಧ ದೊರೆಯುತ್ತದೆ. ಆದರೆ, ಅದರ ಬಳಕೆ ನಮಗೆ ಗೊತ್ತಿರುವುದಿಲ್ಲ, ಹಾಗಾಗಿ ನಮ್ಮ ಇಂದಿನವರು ಹಿತ್ತಲು ಗಿಡ ಮದ್ದಲ್ಲ ಎಂದಿದ್ದಾರೆ. ಆದರೆ ಇಂದು ಹಿತ್ತಲ ಗಿಡ ಮದ್ದು ಎಂದು ತೋರಿಸುವ ಕೆಲಸವನ್ನು ಕೈಗೆತ್ತಿಕೊಂಡಿರುವ ಮಠದ ಶ್ರೀಗಳ ಕಾರ್ಯ ಸ್ತುತ್ಯಾರ್ಹ ಎಂದರು.


ಆರೋಗ್ಯ ಉಚಿತ ತಪಾಸಣೆ ಶಿಬಿರಕ್ಕೆ ನೂರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಎಲ್ಲರಿಗೂ ಮಠದ ವತಿಯಿಂದ ಉಪಾಹಾರದ ವ್ಯವಸ್ಥೆ ಮಾಡಿ, ಆಯುಷ್ ಇಲಾಖೆ ವತಿಯಿಂದ ಉಚಿತ ಔಷಧ ವಿತರಣೆ ಮಾಡಲಾಯಿತು.


ಅಲ್ಲದೆ ಶ್ರೀ ಚಂದ್ರಶೇಖರ್ ಪಂಡಿತ್ ಅವರು ಉಚಿತವಾಗಿ ಕಣ್ಣಿನ ದೋಷಕ್ಕೆ ಔಷಧ ನೀಡಿದರು. ನಂಜನಗೂಡಿನ ಪಾರಂಪರಿಕ ವೈದ್ಯ ಈಶ್ವರ್, ಆಯುಷ್ ಇಲಾಖೆಯ ಡಾ.ಸುಧಾ ಡಾ.ಕುಸುಮಾ, ಆರ್‌ಎಸ್‌ಎಸ್ ಸ್ವಯಂ ಸೇವಕ ಬೆಂಡರಹಳ್ಳಿ ಶಿವಕುಮಾರ್, ಸುರೇಶ್, ಅರುಣ್‌ಕುಮಾರ್, ವಕೀಲ ಮಧುಸೂದನ್, ಮುಡಿಗುಂಡ ಉದಯ ಕುಮಾರ್, ತೇರಂಬಳ್ಳಿ ನಾಗಭೂಷಣ್, ಕುಂತೂರು ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್, ಗೋ ಸೇವಾ ಘಟಕದ ಮಹಲಿಂಗ, ನೈಸರ್ಗಿಕ ಕೃಷಿಕ ರೇಚಣ್ಣ, ಸತ್ತೆಗಾಲ ರವಿಶಂಕರ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net