

ಸಿಂಧನೂರು: ಭಾರತೀಯ ಆಯುರ್ವೇದ ಚಿಕಿತ್ಸಾ ಪದ್ಧತಿ ಉಳಿಸುವ ಕೆಲಸವಾಗಬೇಕಿದೆ ಎಂದು ಉದ್ಯಮಿ, ಬಿಜೆಪಿ ಪ್ರಮುಖ ರಾಜೇಶ ಹಿರೇಮಠ ಹೇಳಿದರು.
ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಆಯುರ್ವೇದ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಆಯುರ್ವೇದ ಆಧಾರಿತ ಚಿಕಿತ್ಸಾ ಪದ್ಧತಿ ನೈಸರ್ಗಿಕವಾಗಿ ಲಭ್ಯವಿರುವ ಗಿಡಮೂಲಿಕೆ, ವನಸ್ಪತಿಗಳನ್ನು ಬಳಸಿ ತಯಾರಿಸಲಾಗುತ್ತದೆ.
ಆಧುನಿಕತೆ ಭರಾಟೆಯಲ್ಲಿ ಏನೆಲ್ಲ ಸಾಧನೆ ಮಾಡಲು ಹೊರಟಿರುವ ನಾವು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಒಳಗಾಗಿದ್ದೇವೆ. ಆಯುರ್ವೇದ ಚಿಕಿತ್ಸೆ ಪಡೆಯುವುದರಿಂದ ಯಾವುದೇ ಅಡ್ಡಪರಿಣಾಮಗಳು ಬೀರಲ್ಲ ಎಂದರು.
ಆಶ್ರಮದ ಅಧ್ಯಕ್ಷ ಸದಾನಂದ ಮಹಾರಾಜ್ ಮಾತನಾಡಿ, ಸಾಮಾನ್ಯ ಜನರ ಆರೋಗ್ಯದ ಕಡೆಗೆ ಗಮನಹರಿಸುವ ದೃಷ್ಟಿಯಿಂದ ಹಾಗೂ ಆಯುರ್ವೇದ ಪದ್ಧತಿ ಮಹತ್ವ ತಿಳಿಸಲು ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ಆಯುರ್ವೇದ ವೈದ್ಯ ಮಂತ್ರಾಲಯದ ಅಂಬಾದಾಸ ಕುಲಕರ್ಣಿ ಮಾತನಾಡಿ, ಋತುಮಾನಕ್ಕೆ ತಕ್ಕಂತೆ ಆಹಾರ ಪದ್ಧತಿ ಉಪಯೋಗಿಸಬೇಕು. ಆಂಗ್ಲ ಭಾಷೆಯಲ್ಲಿ ಆಯುರ್ವೇದ ಕಲಿಯುವುದು ಸೂಕ್ತವಲ್ಲ. ಕನ್ನಡ ಮಾತೃಭಾಷೆಯಲ್ಲಿ ಆಯುರ್ವೇದ ಕಲಿತು ಚಿಕಿತ್ಸೆ ನೀಡುವುದು ಸೂಕ್ತವೆಂದು ತಿಳಿಸಿದರು.
ಸಂಸ್ಕೃತ ಪ್ರಾಧ್ಯಾಪಕ ಮನೋಜ ಬಾಪಟ್ ಮಾತನಾಡಿದರು. ಸಾವಯವ ಕೃಷಿಕರಾದ ರಾಮಚಂದ್ರ ರೆಡ್ಡಿ ಹುಡಾ, ಅಮರೇಶ ಹೂಗಾರ, ಬೀರಪ್ಪ ಶಂಭೋಜಿ, ಶಿಕ್ಷಕ ಕಳಕಪ್ಪ ಗಡಾದ ಇದ್ದರು.