

ಮಂಡ್ಯ: ಉತ್ತಮ ಆರೋಗ್ಯಕ್ಕೆ ಆಯುರ್ವೇದ ಔಷಧ ಸಹಕಾರಿ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಆಯುರ್ವೇದದ ಮಹತ್ವದ ಬಗ್ಗೆ ತಿಳಿಸೋಣ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಪ್ರತಿದಿನ ಪ್ರತಿ ಮನೆಯಲ್ಲೂ ಆಯುರ್ವೇದ ಎಂಬ ಘೋಷವಾಕ್ಯದಡಿ ಆಯೋಜಿಸಿದ್ದ 7ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮುಂದಿನ 10 ವರ್ಷದ ವೇಳೆಗೆ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಒಂದು ಆಯುರ್ವೇದ ಹೆಲ್ತ್ ಕ್ಲಿನಿಕ್ ಇರಬೇಕು. ಎಲ್ಲವೂ ಪರಿವರ್ತನೆ ಆಗಬೇಕು. ಪರಿವರ್ತನೆ ಜಗದ ನಿಯಮ. ಉತ್ತಮವಾದ ಗಿಡಮೂಲಿಕೆಗಳಿಂದ ತಯಾರಾದ ಔಷಧಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.
ಆಯುರ್ವೇದದ ಮೂಲಕ ದೇಶದ ಘನತೆ ಹೆಚ್ಚಾಗಿದೆ. ಪ್ರಪಂಚದಲ್ಲಿ ಎಲ್ಲರೂ ನಮ್ಮ ದೇಶಕ್ಕೆ ಬಂದು ಆಯುರ್ವೇದದ ಬಗ್ಗೆ ಅಧ್ಯಯನ ಮಾಡುತ್ತಾರೆ. ಪಾಲಕರು ತಮ್ಮ ಮಕ್ಕಳಿಗೂ ಆಯುರ್ವೇದ ಪದ್ಧತಿ ಬಳಸಿ ಆರೋಗ್ಯ ವೃದ್ಧಿಗೆ ಕ್ರಮವಹಿಸಬೇಕು. ಮನುಷ್ಯ ಆರೋಗ್ಯವಾಗಿದ್ದರೆ ಮನಸ್ಸು ವಿಶಾಲವಾಗಿರುತ್ತದೆ. ಮಾತ್ರವಲ್ಲದೆ ಆತ ಸಂತೋಷವಾಗಿರುತ್ತಾನೆ ಎಂದು ಹೇಳಿದರು.
ಆರ್ಯುವೇದ ಅಧಿಕಾರಿ ಡಾ.ಮಧು ಮಾಲತಿ ಮಾತನಾಡಿ, ಜನರಿಂದ ಜನರಿಗಾಗಿ ಸಂದೇಶ, ಜನರ ಸಹಭಾಗಿತ್ವ, ಜನ ಆಂದೋಲನ ಎಂಬ ಮೂರು ಉದ್ದೇಶ ಇಟ್ಟುಕೊಂಡು ಆಯುರ್ವೇದ ದಿನವನ್ನು ಆಚರಿಸಲಾಗುತ್ತಿದೆ. ಉದ್ಯಾನವನ, ಜಮೀನು ಹಾಗೂ ಮನೆಯ ಸುತ್ತಮುತ್ತಲಿನಲ್ಲಿ ಆಯುರ್ವೇದ ಗಿಡಗಳನ್ನು ನೆಟ್ಟು ಅವುಗಳನ್ನು ಮುಖ್ಯವಾಹಿನಿಗೆ ತಂದು ಸಾರ್ವಜನಿಕರಿಗೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಮಂಡ್ಯದ 6 ತಾಲೂಕಿನಲ್ಲಿ ಆಯುರ್ವೇದ ಪದ್ಧತಿಯ ಉದ್ದೇಶಗಳನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದಿದ್ದೇವೆ. ಆಯುರ್ವೇದವನ್ನು ಜೀವನದಲ್ಲಿ ಅಳವಡಿಸಿಕೊಂಡು ಇನ್ನೊಬ್ಬರಿಗೆ ಮಾದರಿಯಾಗಿ ಬದುಕಬೇಕು. ಸಮುದ್ರದಲ್ಲಿ ಹೇಗೆ ಧನ್ವಂತ್ರಿ ಉದ್ಭವವಾಯಿತೋ, ಅದೇ ರೀತಿ ಪ್ರತಿ ಮನೆಯಲ್ಲೂ ಆಯುರ್ವೇದದ ಮಂಥನವಾಗಬೇಕು ಎಂದರು.
ಆಯುರ್ವೇದ ತಜ್ಞ ವೈದ್ಯ ಹಾಗೂ ನಿವೃತ್ತ ಜಂಟಿ ನಿರ್ದೇಶಕ ಡಾ.ಬಿ.ಎ.ವೆಂಕಟೇಶ್ ಮಾತನಾಡಿ, ಬೆಟ್ಟದ ನೆಲ್ಲಿಕಾಯಿಯ ಚೂರನ್ನು ಪ್ರತಿದಿನ ತೆಗೆದುಕೊಂಡರೆ ಎಷ್ಟೋ ರೋಗಗಳನ್ನು ತಡೆಗಟ್ಟಬಹುದು. ಶರೀರದ ಶಕ್ತಿಯನ್ನು ವಯಸ್ಸಿಗನುಗುಣವಾಗಿ ಸದೃಢವಾಗಿ ಇಟ್ಟುಕೊಳ್ಳಬಹುದು. ಇದೇ ರೀತಿ ಅನೇಕ ದ್ರವ್ಯಗಳು ಇವೆ. ಅವುಗಳನ್ನು ಪ್ರತಿದಿನ ನಾವು ತೆಗೆದುಕೊಂಡರೆ ಆರೋಗ್ಯವಾಗಿ ಇರಲು ಸಾಧ್ಯ. ಇದನ್ನು ರಾಸಾಯನಿಕ ಚಿಕಿತ್ಸೆ ಎನ್ನುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಆಯುರ್ವೇದದಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಜಿಪಂ ಉಪ ಕಾರ್ಯದರ್ಶಿ ಸಂಜೀವಪ್ಪ, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಬಿ.ಎಸ್.ಸೀತಾಲಕ್ಷ್ಮೀ, ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕಿ ಡಾ.ವೀಣಾ ಜಿ.ರಾವ್, ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನ ಕಾರ್ಯದರ್ಶಿ ಕೆ.ರಾಘವೇಂದ್ರ, ಡಾ.ಕಲಾರಾಧ, ಡಾ.ಶ್ರೀನಿವಾಸ್ ಸೇರಿದಂತೆ ಆಯುಷ್ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಇದ್ದರು.