

ಆಮಂತ್ರಣ ಪತ್ರಿಕೆ ಇಲ್ಲ, ಶಾಸಕರು, ಹಿರಿಯ ಅಧಿಕಾರಿಗಳಿಗೆ ಆಹ್ವಾನವಿಲ್ಲ
ಹೊಸಪೇಟೆ: ಜಿಲ್ಲೆಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳಿಗೆ ಆಹ್ವಾನವೂ ನೀಡದೇ ಕಾಟಾಚಾರಕ್ಕೆ ಎಂಬಂತೆ ಜಿಲ್ಲಾ ಆಯುಷ್ ಇಲಾಖೆಯಿಂದ ನಗರದ ಕಾಲೇಜೊಂದರಲ್ಲಿ ಶುಕ್ರವಾರ ೮ನೇ ರಾಷ್ಟ್ರೀಯ ಆಯುರ್ವೇದ ದಿನವನ್ನು ಆಚರಿಸಿದೆ.
ಧನ್ವಂತರಿ ಜಯಂತಿ ಅಂಗವಾಗಿ ಕೇಂದ್ರ ಆಯುಷ್ ಮಂತ್ರಾಲಯದ ನಿರ್ದೇಶನದಂತೆ ಕಳೆದ ೭ ವರ್ಷಗಳಿಂದ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಇದು ೮ನೇ ಜಯಂತಿ. ಕೇಂದ್ರ ಸರ್ಕಾರವೂ ಆಯುಷ್ ಪದ್ಧತಿಯ ಚಿಕಿತ್ಸಾ ವಿಧಾನಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಆಯುಷ್ ಚಿಕಿತ್ಸಾ ಪದ್ಧತಿ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಆಯುಷ್ ಆಸ್ಪತ್ರೆ ಹಾಗೂ ಹೆಚ್ಚು ಜನ ಸಂದಣಿ ಸೇರುವ ಕಡೆ ಕಾರ್ಯಕ್ರಮವನ್ನು ಆಯೋಜಿಸಿದ್ದರೆ, ವಿಜಯನಗರ ಜಿಲ್ಲಾ ಆಯುಷ್ ಅಧಿಕಾರಿಗಳು ಇಲ್ಲಿನ ಖಾಸಗಿ ಆರ್ಯುವೇದ ಮೆಡಿಕಲ್ ಕಾಲೇಜಿನಲ್ಲಿ ನೆಪ ಮಾತ್ರಕ್ಕೆ ಎಂಬಂತೆ ಕಾರ್ಯಕ್ರಮ ನಿರ್ವಹಿಸಿ ಕೈತೊಳೆದುಕೊಂಡಿರುವುದು ಜನಪ್ರತಿನಿಧಿಗಳಲ್ಲಿ ಅಸಮಾಧಾನ ಮೂಡಿಸಿದೆ.
ಆಹ್ವಾನ ಪತ್ರಿಕೆಯೂ ಇಲ್ಲ:
ಸಾಮಾನ್ಯವಾಗಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಇಲಾಖೆಗಳಿಂದ ಸರ್ಕಾರದ ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಲಾಗುತ್ತದೆ. ಸ್ಥಳೀಯ ಶಾಸಕರು ಅಧ್ಯಕ್ಷತೆ ವಹಿಸಿದರೆ, ಜಿಲ್ಲೆಯ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಮುಖ್ಯಅತಿಥಿಗಳನ್ನಾಗಿ, ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಅವರನ್ನು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುತ್ತಾರೆ. ಆದರೆ, ಶುಕ್ರವಾರ ಆಯುಷ್ ಇಲಾಖೆ ಏರ್ಪಡಿಸಿದ್ದ ೮ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯಲ್ಲಿ ಇದ್ಯಾವುದೂ ಪಾಲನೆಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕಾರ್ಯಕ್ರಮದ ಉಸ್ತುವಾರಿ ವಹಿಸಿರುವ ಆಯುಷ್ ಇಲಾಖೆ ಡಾ.ಗುರುಬಸವರಾಜ, ತರಾತುರಿಯಲ್ಲಿ ಕಾರ್ಯಕ್ರಮ ನಿಗದಿಯಾಗಿದ್ದ ರಿಂದ ಆಹ್ವಾನ ಪತ್ರಿಕೆಯನ್ನೂ ಮುದ್ರಿಸಿಲ್ಲ. ಶಿಷ್ಟಾಚಾರದಂತೆ ಗಣ್ಯರನ್ನು ಆಹ್ವಾನಿಸಿಲ್ಲ. ಬಳ್ಳಾರಿಯಲ್ಲೂ ಕಾರ್ಯಕ್ರಮ ಇರುವುದರಿಂದ ಆಯುಷ್ ಜಿಲ್ಲಾಧಿಕಾರಿ ಡಾ.ಸುಜಾತಾ ಪಾಟೀಲ ಈ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಸುಜಾತಾ ಪಾಟೀಲ ಅವರ ಕಾರ್ಯವೈಖರಿ ಬಗ್ಗೆ ನಮಗೆ ಮೊದಲಿನಿಂದಲೂ ಬೇಸರವಿದೆ. ತಮಗೆ ತೋಚಿದ್ದನ್ನೇ ಮಾಡುತ್ತಾರೆ. ಪ್ರತೀ ವರ್ಷ ರಾಷ್ಟ್ರೀಯ ಆಯುರ್ವೇದ ದಿನವನ್ನು ಆಚರಿಸಲಾಗುತ್ತಿದ್ದು, ಇದು ತರಾತುರಿಯಾಗಲು ಸಾಧ್ಯವಿಲ್ಲ. ಶಾಸಕರನ್ನು ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಬಳಿ ಹಕ್ಕು ಚ್ಯುತಿ ಮಂಡನೆ ಮಾಡುತ್ತೇನೆ. - ಎಚ್.ಆರ್.ಗವಿಯಪ್ಪ, ಶಾಸಕ.