

ಮೈಸೂರು: ಆರೋಗ್ಯ ಭಾರತಿ ಮತ್ತು ಅಪೂರ್ವ ಸ್ನೇಹ ಬಳಗದ ವತಿಯಿಂದ ಚಾಮುಂಡಿಪುರಂನಲ್ಲಿ ಬುಧವಾರ ಆಯುರ್ವೇದ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಉಚಿತವಾಗಿ 500 ವಿವಿಧ ಆಯುರ್ವೇದ ಸಸಿಗಳನ್ನು ನೀಡಿ ಆಯುರ್ವೇದದ ಕುರಿತು ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಆಯುರ್ವೇದ ವೈದ್ಯ ಡಾ. ಚಂದ್ರಶೇಖರ್ ಮಾತನಾಡಿ, ಆಯುರ್ವೇದ ಭಾರತದ ಪ್ರಾಚೀನ ಚಿಕಿತ್ಸಾ ಪದ್ಧತಿಯಾಗಿದ್ದು, ಇಂದು ವಿಶ್ವದ ಗಮನ ಸೆಳೆಯುತ್ತಿದೆ. ಸಹಜ ಬದುಕಿನ ಆಹಾರಶೈಲಿಯಲ್ಲಿ ಆಯುರ್ವೇದದ ಚಿಕಿತ್ಸೆ ಗುಣಗಳ ಅಂಶಗಳಿದ್ದು, ಇದಕ್ಕೆ ಹೆಚ್ಚು ಒತ್ತು ನೀಡಬೇಕಿದೆ ಎಂದರು.
ಈ ಹಿಂದೆ ನಾವು ಸೇವಿಸುವ ಆಹಾರದಲ್ಲಿ ಔಷಧ ಗುಣವಿತ್ತು .ಇಂದು ಔಷಧವನ್ನೇ ಆಹಾರದ ರೀತಿಯಲ್ಲಿ ಸೇವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಆಯುರ್ವೇದದ ಗಿಡಗಳ ಕುರಿತು ಮಕ್ಕಳಿಗೆ ಹೆಚ್ಚಿನ ಮಾಹಿತಿ ನೀಡಿ ಮುಂದಿನ ತಲೆಮಾರು ಹೆಚ್ಚಿನ ಪ್ರಮಾಣದಲ್ಲಿ ಆಯುರ್ವೇದದ ಕಡೆ ಮುಖ ಮಾಡುವಂತೆ ಮಾಡಬೇಕೆಂದು ಕರೆ ನೀಡಿದರು.
ಸಮಾಜ ಸೇವಕ ಡಾ. ಕೆ ರಘುರಾಂ ವಾಜಪೇಯಿ ಮಾತನಾಡಿ, ಆಯುರ್ವೇದ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಎಲ್ಲದಕ್ಕೂ ಮಾತ್ರೆಗಳು ಪರಿಹಾರವಲ್ಲ. ಸಹಜ ಬದುಕಿನ ಕ್ರಮವಾಗಿ ಬಾಲ್ಯದಿಂದಲೇ ಆಯುರ್ವೇದದ ಅಂಶಗಳನ್ನು ಹೊಂದಿರುವ ಸೊಪ್ಪು, ತರಕಾರಿ, ಸಿರಿಧಾನ್ಯ ಬಳಸಬೇಕು. ಯೋಗದಂತಹ ಜೀವನ ಕ್ರಮಗಳ ಬಗ್ಗೆ ಪ್ರತಿ ಶಾಲೆಗಳಲ್ಲಿ ಅಭಿಯಾನ ಹಮ್ಮಿಕೊಳ್ಳಬೇಕು. ಈ ರೀತಿಯ ಜೀವನ ಕ್ರಮದಿಂದ ನಮ್ಮ ಆರೋಗ್ಯ ವೃದ್ಧಿಸಿಕೊಳ್ಳಬಹುದು ಎಂದರು.