ಆಯುರ್ವೇದ ಚಿಕಿತ್ಸೆ ಹೆಚ್ಚು ಪರಿಣಾಮಕಾರಿ: ಅಪರ ಜಿಲ್ಲಾಧಿಕಾರಿ

udp-10-ayush
Published on

ಉಡುಪಿ: ಉತ್ತಮ ಆರೋಗ್ಯಕ್ಕಾಗಿ ಹಾಗೂ ರೋಗಗಳ ವಿರುದ್ಧ ಪ್ರತಿರೋಧ ಶಕ್ತಿ ಹೆಚ್ಚಿಸಿಕೊಳ್ಳಲು ಆಯುರ್ವೇದ ಚಿಕಿತ್ಸೆಗಳು ಹಾಗೂ ಔಷಧಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಹೇಳಿದರು.

ಅಜ್ಜರಕಾಡು ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಉಡುಪಿ ಇವರ ಸಹಯೋಗದಲ್ಲಿ ಧನ್ವಂತರಿ ಜಯಂತಿಯ ಅಂಗವಾಗಿ ನಡೆದ ಆಯುರ್ವೇದ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಆಯುರ್ವೇದವು ಆಧುನಿಕ ಕಾಲದಲ್ಲಿ ಪ್ರಸ್ತುತವಾಗಿರುವ ಔಷಧ. ಇದು ಅತ್ಯಂತ ಪುರಾತನ ಆರೋಗ್ಯ ವ್ಯವಸ್ಥೆಯಾಗಿದ್ದು, ರೋಗಗಳ ತಡೆಗಟ್ಟುವಿಕೆ ಹಾಗೂ ಆರೋಗ್ಯ ವೃದ್ಧಿ ಆಯುರ್ವೇದದ ಮುಖ್ಯ ಗುರಿಯಾಗಿದೆ ಎಂದರು. ಧನ್ವಂತರಿ ರೋಗ ರುಜಿನಗಳಿಂದ ಮುಕ್ತಿ ಹೊಂದಲು ಆಯುರ್ವೇದ ಜ್ಞಾನದ ಅತ್ಯಂತ ಪ್ರಾಚೀನ ವೈದ್ಯಕೀಯ ವ್ಯವಸ್ಥೆಯನ್ನು ಮನುಕುಲಕ್ಕೆ ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಸತೀಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಆರೋಗ್ಯ ದೇವರಾದ ಧನ್ವಂತರಿ ಜಯಂತಿಯನ್ನು ಅಶ್ವಿನಿ ಅಥವಾ ಅಶ್ವಯುಜ ಮಾಸದ ಅಮಾವಾಸ್ಯೆಯ ಹಿಂದಿನ ದಿನದಂದು ಆಚರಿಸಲಾಗುತ್ತಿದೆ. ಈ ಬಾರಿ 8 ನೇ ಆಯುರ್ವೇದ ದಿನಾಚರಣೆಯನ್ನು “ಪ್ರತಿದಿನ ಪ್ರತಿಯೊಬ್ಬರಿಗೂ ಸಮಗ್ರ ಆರೋಗ್ಯಕ್ಕಾಗಿ ಆಯುರ್ವೇದ” ಎಂಬ ಘೋಷಣೆಯೊಂದಿಗೆ ಆಚರಿಸಲಾಗುತ್ತಿದೆ ಎಂದರು.

ತಜ್ಞ ವೈದ್ಯರಾದ ಡಾ. ಶ್ರೀಧರ್ ಬಾಯರಿ ರವರು “ಆಯುರ್ವೇದ ಚಿಕಿತ್ಸೆ” ಯ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಆಯುಷ್ ಫೆಡರೇಷನ್‌ನ ಜಿಲ್ಲಾ ಅಧ್ಯಕ್ಷ ಡಾ.ನಾರಾಯಣ್ ಅಂಚನ್, ಆಯುಷ್ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ನಾಗರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಡಾ. ವೀಣಾ ಕಾರಂತ ನಿರೂಪಿಸಿ, ಶ್ಯಾಮರಾವ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net