

ಮಡಿಕೇರಿ: ಆಯುರ್ವೇದದಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ನೀಮಾ ಕೊಡಗು ಸಂಸ್ಥೆ ವತಿಯಿಂದ ಆಯೋಜಿತ ೭ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಪ್ರಯುಕ್ತ ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ, ರೆಡ್ ಕ್ರಾಸ್ ಸಂಸ್ಥೆ, ರೋಟರಿ ವುಡ್ಸ್, ಕೊಡಗು ಹವ್ಯಕ ವಲಯ, ಬಿ.ಜೆ.ಪಿ ಯುವ ಮೋರ್ಚಾ, ಸಿದ್ದಾಪುರ ಕೇಸರಿ ಯೂತ್ ಮೂಮ್ಮೆಮೆಂಟ್, ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಹಾಗೂ ಕೊಡಗು ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಕೆಳಗಿನ ಗೌಡ ಸಮಾಜದಲ್ಲಿ ಅಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಲೋಪಥಿಕ್ ಔಷಧಿಯೊಂದಿಗೆ ಆಯುರ್ವೇದವನ್ನು ನಾವು ಅಳವಡಿಸಿಕೊಂಡಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ. ಆಯುರ್ವೇದ ಚಿಕಿತ್ಸೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಆರೋಗ್ಯವಂತ ಮನಸ್ಸು ಹಾಗೂ ದೇಹಕ್ಕೆ ಯೋಗ, ಧ್ಯಾನವನ್ನು ನಮ್ಮ ದೈನಂದಿನ ಬದುಕಿನಲ್ಲಿ ರೂಢಿಸಿಕೊಳ್ಳಬೇಕೆಂದು ತಿಳಿಸಿದರು.
ಆಯುರ್ವೇದ, ಯೋಗ, ಯುನಾನಿ, ಸಿದ್ದ, ಹೋಮಿಯೋಪತಿ(ಆಯುಷ್) ಒಂದಕ್ಕೆ ಒಂದು ಪೂರಕವಾಗಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ತಿಳಿಸಿದರು.
ಸುಳ್ಯದ ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಲೀಲಾಧರ್, ದೈಹಿಕ, ಮಾನಸಿಕ ಆರೋಗ್ಯದಲ್ಲಿ ಆಯುರ್ವೇದ ಪ್ರಮುಖ ಪಾತ್ರ ವಹಿಸುತ್ತದೆಂದರು.
ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಆಯುರ್ವೇದವೆನ್ನುವುದು ನಾವು ನಮ್ಮ ಮನಸ್ಸಿನ ಆರೋಗ್ಯವನ್ನು ಸ್ವಸ್ಥವಾಗಿಡುವಂತೆ ಮಾಡುತ್ತದೆ. ಆಯುರ್ವೇದವನ್ನು ತಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡು ಆರೋಗ್ಯವಂತರಾಗಿರುವಂತೆ ಕರೆ ನೀಡಿದರು.
ಸಮಾರಂಭದಲ್ಲಿ ನೀಮಾ ಕೊಡಗು ಸಂಸ್ಥೆಯ ಅಧ್ಯಕ್ಷ ಡಾ. ರಾಜಾರಾಂ ಹಾಗೂ ನೀಮಾ ಸಂಸ್ಥೆಯ ವೈದ್ಯರುಗಳು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ರೇಣುಕಾದೇವಿ, ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾಧ್ಯಕ್ಷ ರವೀಂದ್ರ, ರೋಟರಿ ವುಡ್ಸ್ ವಸಂತ್ ಕುಮಾರ್, ಕೊಡಗು ಹವ್ಯಕ ವಲಯದ ಸದಸ್ಯರು, ಬಿ.ಜೆ.ಪಿ ಯುವ ಮೋರ್ಚಾದ ಕಾರ್ಯಕರ್ತರು, ಸಿದ್ದಾಪುರ ಕೇಸರಿ ಯೂತ್ ಮೂಮೆಂಟ್‌ನ ಅಧ್ಯಕ್ಷ ಪ್ರವೀಣ್ ಸಿದ್ದಾಪುರ, ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಅಧ್ಯಕ್ಷ ಅಂಬೆಕಲ್ ಜೀವನ್ ಹಾಗೂ ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಎಚ್.ಆರ್.ಹರೀಶ್ ಕುಮಾರ್ ಉಪಸ್ಥಿತರಿದ್ದರು.
ಧನ್ವಂತರಿ ಯಾಗದೊಂದಿಗೆ ಆರಂಭಗೊಂಡ ಶಿಬಿರದಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ತಜ್ಞರು ತಪಾಸಣೆ ಮತ್ತು ಸಲಹೆ ನೀಡಿದರು. ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ದೇಶದ ೭೫ ಜಾಗಗಳಲ್ಲಿ ನಡೆಯುವಂತೆ ಕೊಡಗಿನಲ್ಲಿಯೂ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಂಡರು.