

ಚಿಕ್ಕಬಳ್ಳಾಪುರ: ನೂತನ ಸತ್ಯ ಸಾಯಿ ಆಸ್ಪತ್ರೆಯಲ್ಲಿ ಆಯುರ್ವೇದ ಸಂಶೋಧನೆಯಾಧಾರಿತ ಸಂಯೋಜಿತ ಔಷಧ ವಿಭಾಗ ಕೇಂದ್ರ ಕಾರ್ಯಾರಂಭಿಸಲಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಪ್ರೇಮಾಮೃತಮ್ ಸಭಾಂಗಣದಲ್ಲಿ ಕೈಗೊಂಡಿದ್ದ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ದ 67ನೇ ದಿನದ ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಣಾಮಕಾರಿ ಚಿಕಿತ್ಸೆ ಸೇವೆ ಒದಗಿಸುವುದರ ಬಗ್ಗೆ ಘೋಷಿಸಿದ್ದಾರೆ.
ಪ್ರಾಚೀನ ಜ್ಞಾನ ವ್ಯವಸ್ಥೆಯಲ್ಲಿ ಆಯುರ್ವೇದವು ಹೇಗೆ ಕಾರ್ಯನಿರ್ವಹಿಸುತ್ತಿತ್ತು ಎಂಬುದನ್ನು ಸಂಶೋಧನೆಯಿಂದ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಹೀಗಾಗಿ ಸತ್ಯಸಾಯಿ ಆಸ್ಪತ್ರೆಯಲ್ಲಿ ಸಂಯೋಚಿತ ಔಷಧ ವಿಭಾಗವನ್ನು ತೆರೆಯಲಾಗುತ್ತಿದೆ. ಇದು ಭಾರತೀಯ ಚಿಕಿತ್ಸಾ ವಿಧಾನದ ಬಗ್ಗೆ ಮತ್ತಷ್ಟು ಮಾಹಿತಿ, ಸೇವೆಯನ್ನು ನೀಡಲಿದೆ ಎಂದು ತಿಳಿಸಿದ್ದಾರೆ.
ವಿಷ್ಣುವಿನ ಅವತಾರವಾಗಿರುವ ಧನ್ವಂತರಿಯು ಔಷಧವನ್ನು ಪ್ರತಿನಿಧಿಸುತ್ತಿದ್ದು ಅನಾರೋಗ್ಯ ಎನ್ನುವುದು ಕತ್ತಲೆಯಾಗಿದೆ. ಇದನ್ನು ಪರಿಣಾಮಕಾರಿ ಔಷಧಿ, ಗುಣಮಟ್ಟದ ಚಿಕಿತ್ಸೆಯ ಮೂಲಕ ಹೋಗಲಾಡಿಸಬೇಕಾಗಿದೆ ಎಂದಿದ್ದಾರೆ.
*ಜಾಗತಿಕ ಪುರಸ್ಕಾರ
ಕಾರ್ಯಕ್ರಮದಲ್ಲಿ ಸ್ಟ್ರೈಡ್ಸ್ ಫಾರ್ಮಾ ಸೈನ್ಸ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಬದ್ರಿ ಕಾಮಂದೂರ್ ಅವರಿಗೆ ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ ನೀಡಿ ಗೌರವಿಸಲಾಯಿತು. ಡಾ ಹಿರಾಮಾಲಿನಿ ಮತ್ತು ಡಾ ದಿವ್ಯಾ ಶೇಷಾದ್ರಿ ರಚನೆಯ 'ಎನ್ ಇಂಟ್ರಡಕ್ಷನ್ ಟು ಸ್ಪಿರಿಚುಯಾಲಿಟಿ ಅಂಡ್ ಟ್ರಡಿಷನಲ್ ಇಂಡಿಯನ್ ಮೆಡಿಸಿನ್' ಪುಸ್ತಕವನ್ನು ಸದ್ಗುರುಗಳು ಲೋಕಾರ್ಪಣೆ ಮಾಡಿದರು.