

ವಿಜಯವಾಣಿ ಸುದ್ದಿಜಾಲ ಉಡುಪಿ
ಹಿಂದಿನಿಂದಲೂ ಜನರ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಆಯುರ್ವೇದದ ಔಷಧಗಳು ಇಂದಿಗೂ ಸಹ ತನ್ನ ಛಾಪು ಉಳಿಸಿಕೊಂಡಿದೆ. ಇಂಗ್ಲಿಷ್ ಮೆಡಿಸಿನ್ಗಳಿಂದ ವಾಸಿಯಾಗದ ಅನೇಕ ಕಾಯಿಲೆಗಳು ಗಿಡಮೂಲಿಕೆಗಳಿಂದ ತಯಾರಿಸುವ ಆಯುರ್ವೇದದ ಔಷಧಗಳಿಂದ ಆರೋಗ್ಯವರ್ಧನೆ ಸಾಧ್ಯವಿದೆ. ಜನರೂ ಸಹ ಈ ಪದ್ಧತಿಯ ಚಿಕಿತ್ಸೆಗೆ ಒಲವು ಹೊಂದಿದ್ದರಿಂದ ಬಿಎಎಂಎಸ್ ವಿದ್ಯಾರ್ಥಿಗಳಿಗಿದೆ ವಿಪುಲ ಅವಕಾಶವಿದೆ ಎಂದು ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ಅಭಿಮತ ವ್ಯಕ್ತಪಡಿಸಿದರು.
ಉಡುಪಿಯ ಕುತ್ಪಾಡಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಸಂಹಿತಾ ಸಿದ್ಧಾಂತ ಹಾಗೂ ಸಂಸ್ಕೃತ ವಿಭಾಗದ ವತಿಯಿಂದ ಬಿಎಎಂಎಸ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಆಯುರ್ ದಿಗ್ದರ್ಶಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ ಎಸ್., ಆಯುರ್ವೇದ ವೈದ್ಯರಾಗುವವರಲ್ಲಿ ಇರಬೇಕಾದ ಗುಣ-ಲಕ್ಷಣ ಕುರಿತು ಮಾಹಿತಿ ನೀಡಿದರು. ಪ್ರಧಾನ ಸಂಪನ್ಮೂಲ ವ್ಯಕ್ತಿ ವಿಜಯಪುರದ ಪವಮಾನ ಆಯುರ್ವೇದ ಫಾರ್ಮಸಿ ಸ್ಥಾಪಕ ಡಾ. ಶ್ರೀನಿವಾಸ ಒಡೆಯರ್ ಮಾತನಾಡಿ, ವೈದ್ಯಕೀಯ ವೃತ್ತಿಯಲ್ಲಿ ಆಯುರ್ವೇದ ಶಾಸ್ತ್ರದ ಆಳವಾದ ಅಧ್ಯಯನದ ಅಗತ್ಯತೆಯನ್ನು ನೈಜ ರೋಗಿಗಳ ಉದಾಹರಣೆಗಳ ಮೂಲಕ ವಿಸ್ತಾರವಾಗಿ ವಿವರಿಸಿದರು.
ಕಾಲೇಜಿನ ರೋಗನಿದಾನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಅರುಣಕುಮಾರ್ ಮಾತನಾಡಿ, ಬಿಎಎಂಎಸ್ ಮುಗಿದ ಬಳಿಕ ಇರುವ ಅವಕಾಶಗಳ ಕುರಿತು ತಿಳಿಸಿದರು.
ಪ್ರಾಧ್ಯಾಪಕರಾದ ಸುಬ್ರಹ್ಮಣ್ಯ ಭಟ್, ಡಾ. ಲಿಖಿತಾ ಡಿ.ಎನ್., ಡಾ. ಮಹಾಲಕ್ಷ್ಮೀ ಎಂ.ಎಸ್., ಡಾ. ಧನಶ್ರೀ ಪಾಟೀಲ್ ಹಾಗೂ ಇನ್ನಿತರ ಉಪನ್ಯಾಸಕರು ಉಪಸ್ಥಿತರಿದ್ದರು.
ಸಂಹಿತಾ ಸಿದ್ಧಾಂತ ವಿಭಾಗಾಧ್ಯಕ್ಷೆ ಡಾ. ವಿದ್ಯಾಲಕ್ಷ್ಮೀ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮ್ಮೇಳನದ ಮುಖ್ಯ ಸಂಘಟನಾ ಕಾರ್ಯದರ್ಶಿ ಡಾ. ಅರ್ಹಂತಕುಮಾರ್ ಎ. ವಂದಿಸಿದರು. ರಾಜ್ಯದ ವಿವಿಧ ಆಯುರ್ವೇದ ಕಾಲೇಜುಗಳಿಂದ 150ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.