

ಮಂಡ್ಯ: ಆಯುಧ ಪೂಜೆ ಅಂಗವಾಗಿ ಜಿಲ್ಲೆಯ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಅಂತೆಯೇ ಜನರು ತಮ್ಮ ವಾಹನ, ಅಂಗಡಿಗಳಲ್ಲಿ ಪೂಜೆ ಸಲ್ಲಿಸಿ ಸಂಭ್ರಮಿಸಿದರು.
ನವರಾತ್ರಿ ಕೊನೆಯ ಮತ್ತು ಆಯುಧ ಪೂಜಾ ದಿನವಾದ ಶುಕ್ರವಾರ ಬೆಳಗ್ಗಿನಿಂದಲೇ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ಆಯೋಜಿಸಲಾಗಿತ್ತು. ಸಾರ್ವಜನಿಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಶುಚಿಗೊಳಿಸಿ ವಿಶೇಷ ಅಲಂಗಾರ ಮಾಡಿ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಸಿಹಿ ಹಂಚಿದರು. ಇನ್ನು ವಿಜಯದಶಮಿ ಅಂಗವಾಗಿ ಶನಿವಾರ ಜಿಲ್ಲೆಯ ಶಕ್ತಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದವು.
ನಗರದ ಶಕ್ತಿ ದೇವತೆ ಕಾಳಿಕಾಂಬ ದೇವಾಲಯ, ಚಾಮುಂಡೇಶ್ವರಿ ಬಡಾವಣೆಯಲ್ಲಿರುವ ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ನಗರದ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು. ನಂತರ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಾಯಿತು. ಬಳಿಕ ಭಕ್ತರಿಗೆ ಬನ್ನಿ ಪತ್ರೆಗಳನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಯಿತು. ಸಾರ್ವಜನಿಕರು ದೇವರ ದರ್ಶನ ಪಡೆದು ಪುನೀತರಾದರು.
ಶ್ರೀರಂಗಪಟ್ಟಣದಲ್ಲಿರುವ ಚಾಮುಂಡೇಶ್ವರಿ ದೇವಾಲಯ, ಗಂಜಾಂನ ನಿಮಿಷಾಂಭ ದೇವಾಲಯದಲ್ಲಿಯೂ ವಿಶೇಷ ಪೂಜೆ ನಡೆಯಿತು. ದಸರಾ ಅಂಗವಾಗಿ ಮೈಸೂರಿಗೆ ತೆರಳುತ್ತಿದ್ದ ಭಕ್ತರು ನಿಮಿಷಾಂಬ ದೇವಾಲಯಕ್ಕೂ ಭೇಟಿ ನೀಡಿ ದೇವಿಯ ದರ್ಶನ ಪಡೆದು ಮುಂದೆ ಸಾಗುತ್ತಿದ್ದುದು ಕಂಡುಬಂತು. ಮದ್ದೂರು ಪಟ್ಟಣದ ಮದ್ದೂರಮ್ಮ ದೇವಾಲಯ, ಉಗ್ರ ನರಸಿಂಹಸ್ವಾಮಿ ದೇವಾಲಯಗಳಲ್ಲಿ ವಿಜಯದಶಮಿ ಅಂಗವಾಗಿ ಧಾರ್ಮಿಕ ಕೈಂಕರ್ಯ ಸಾಂಗೋಪವಾಗಿ ನೆರವೇರಿಸಲಾಯಿತು. ಮಳವಳ್ಳಿ ಪಟ್ಟಣದ ಪಟ್ಟಲದಮ್ಮ ದೇವಸ್ಥಾನ ಸೇರಿದಂತೆ ವಿವಿಧೆಡೆ ವಿಶೇಷ ಪೂಜಾ ಕಾರ್ಯ ನಡೆದವು. ನಾಗಮಂಗಲದ ಮುಳುಕಟ್ಟೆ, ಲಕ್ಷ್ಮೀದೇವಿ, ಪಟ್ಟಲದಮ್ಮ, ಆದಿಚುಂಚನಗಿರಿ ಕ್ಷೇತ್ರ, ಪಾಂಡವಪುರದ ಮಾಂಕಾಳೇಶ್ವರಿ, ಮೇಲುಕೋಟೆಯ ಚಲುವನಾರಾಯಣಸ್ವಾಮಿ, ಯೋಗಾನರಸಿಂಹಸ್ವಾಮಿ ದೇವಾಲಯ ಹಾಗೂ ಇತರೆಡೆ ಪೂಜೆ ನಡೆಯಿತು.