ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಬಾರ್‌ನಲ್ಲಿ ಗಲಾಟೆ ಆಗಿ ಪಾನಮತ್ತ ಯುವಕರಿಂದ ಹಲ್ಲೆಗೆ ಒಳಗಾಗಿದ್ದ ಯುವಕ ಮೃತಪಟ್ಟಿದ್ದಾನೆ.
ದೊಮ್ಮಲೂರು ನಿವಾಸಿ ಕಿರಣ್(೩೦) ಕೊಲೆಯಾದವ. ಈ ಸಂಬಂಧ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಬಾರ್ ಬೆಡ್ಡಿಂಗ್ ಕೆಲಸ ಮಾಡುವ ಕಿರಣ್, ಗುರುವಾರ ರಾತ್ರಿ ಎಚ್‌ಎಎಲ್ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಬಾರ್‌ನಲ್ಲಿ ಮದ್ಯ ಸೇವಿಸಿದ್ದಾನೆ. ಈ ವೇಳೆ ಪಕ್ಕದ ಟೆಬಲ್‌ನಲ್ಲಿ ಮದ್ಯ ಸೇವಿಸುತ್ತಿದ್ದ ಇತರೆ ಯುವಕರ ಜತೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದು, ಅದು ವಿಕೋಪಕ್ಕೆ ಹೋದಾಗ ಬಾರ್ ಸಿಬ್ಬಂದಿ ಜಗಳ ಬಿಡಿಸಿ ಕಳುಹಿಸಿದ್ದಾರೆ. ಮದ್ಯದ ಅಮಲಿನಲ್ಲಿಯೇ ಕಿರಣ್ ದೊಮ್ಮಲೂರಿನಲ್ಲಿರುವ ಮನೆ ಕಡೆ ಬರುವಾಗ ಆಂಧ್ರಬ್ಯಾಂಕ್ ಬಳಿ ಅಡ್ಡಗಟ್ಟಿದ ಆರೋಪಿಗಳು ಮತ್ತೊಮ್ಮೆ ಕಿರಣ್ ಜತೆ ಜಗಳ ತೆಗೆದು, ಈ ವೇಳೆ ತಲೆಗೆ ಕಲ್ಲು ಅಥವಾ ಬಲವಾದ ವಸ್ತುವಿನಿಂದ ಹೊಡೆದಿದ್ದಾರೆ. ಕೆಳಗೆ ಬಿದ್ದ ಕಿರಣ್ ಅಸ್ವಸ್ಥಗೊಂಡಿದ್ದ. ಸ್ಥಳೀಯರ ಮಾಹಿತಿ ಮೇರೆಗೆ ಹೊಯ್ಸಳ ಸಿಬ್ಬಂದಿ ಕಿರಣ್‌ನ್ನು ಬೌರಿಂಗ್‌ಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಿಮಾನ್ಸ್‌ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾನೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.